ಕೊಪ್ಪಳ ಹತ್ತಿರ ಬಿ ಎಸ್ ಪಿಎಲ್ ಕಾರ್ಖಾನೆ ಬೇಡ ಎಂಬ ಜನಾಂದೋಲನಕ್ಕೆ ಬಾಗಿ ಸರಕಾರ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸುವಂತೆ ಹೇಳಿದೆ. ಆದರೆ ಈಗ ಮುಂದೇನು ?
ಕಾರ್ಖಾನೆ ಆರಂಭವಾಗುತ್ತಾ ಅಥವಾ ಕಾರ್ಖಾನೆ ಇಲ್ಲಿಂದ ಜಾಗ ಖಾಲಿ ಮಾಡುತ್ತಾ ? ಎಂಬುದು ಸಾರ್ವಜನಿಕರಲ್ಲಿ ತೀವ್ರ ಚರ್ಚೆ ನಡೆದಿದೆ. ಕಾರ್ಖಾನೆ ವಿಷಯದಲ್ಲಿ ಮುಂದಿನ ಹೋರಾಟವೇನು ? ರಾಜಕಾರಣಿಗಳು ಸುಮ್ಮನಾದರು. ಹೋರಾಟವೂ ನಿಂತು ಹೋಯ್ತಾ ? ಅಂತ ಚರ್ಚೆ ಆಗ್ತಾಯಿದೆ.
ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಉತ್ತರ ಭಾರತ ಪ್ರವಾಸದಿಂದ ಮರಳಿದ ನಂತರ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ. ಶ್ರೀಗಳು ಮಾರ್ಚ್ 19-20 ಕ್ಕೆ ಆಗಮಿಸುವ ಸಾಧ್ಯತೆ ಇದೆ. ನಂತರ ಹೋರಾಟಗಾರರು, ಗಣ್ಯರು , ಯುವಕರು ಶ್ರೀಗಳನ್ನು ಭೇಟಿಯಾಗಿ ಹೋರಾಟದ ಮುಂದಿನ ದಾರಿ ಬಗ್ಗೆ ಚರ್ಚಿಸಲಿದ್ದಾರೆ.
ಇದೆಲ್ಲದರ ನಡುವೆ ಬಿ ಎಸ್ ಪಿ ಎಲ್ ಕಾರ್ಖಾನೆ ಬೇಡ ಎಂದು ಕಾರ್ಖಾನೆ ಹತ್ತಿರದ ಹಾಲವರ್ತಿ ಗ್ರಾಮಸ್ಥರೇ ಈಗ ರೊಚ್ಚಿಗೆದಿದ್ದಾರೆ. ಅಲ್ಲಿನ ಗ್ರಾಮಸ್ಥರು ಹಾಗೂ ಗಣ್ಯರು ಸೇರಿ ನಮ್ಮ ಗ್ರಾಮದ ಹತ್ತಿರ ಈ ಕಾರ್ಖಾನೆ ಬೇಡ. ಇದಕ್ಕೆ ಅನುಮತಿ ನೀಡಬೇಡಿ ಎಂದು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದು ಅದನ್ನು ಗ್ರಾ.ಪಂ. ಪಿಡಿಒ ಮೂಲಕ ಸಲ್ಲಿಸಿದ್ದಾರೆ.
ಈ ಕಬ್ಬಿಣ ಮತ್ತು ಸ್ಪಾಂಜ್ ಕಾರ್ಖಾನೆಗಳಿಂದ ಕಪ್ಪು ಧೂಳು ಹೊಗೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಜನ ನೆಗಡಿ, ಕೆಮ್ಮು ಅಸ್ತಮಾ ರೋಗದಿಂದ ತೊಂದರೆಗೆ ಈಡಾಗಿದ್ದಾರೆ. ಕಾರ್ಖಾನೆಗಳು ಮಾಲಿನ್ಯ ತಡೆಯಲು ಇರುವ ಯಾವುದೇ ನಿಯಮ ಪಾಲಿಸುತ್ತಿಲ್ಲ.
ಈ ಕಾರ್ಖಾನೆ ಆರಂಭವಾದರೆ ನಮ್ಮ ಹಾಲವರ್ತಿ ಮತ್ತು ಅನೇಕ ಗ್ರಾಮಗಳು ಸೇರಿದಂತೆ ಕೊಪ್ಪಳ ನಗರದ ಪರಿಸರ ಹಾಳಾಗಲಿದೆ. ಕಾರ್ಖಾನೆ ಆರಂಭವಾದರೆ ಗ್ರಾಮವನ್ನು ಶಿಫ್ಟ್ ಮಾಡಬೇಕಾದ ಸ್ಥಿತಿ ಬರಲಿದೆ. ಅದಕ್ಕೆ ಈ ಕಾರ್ಖಾನೆ ಆರಂಭಕ್ಕೆ ಅನುಮತಿ ಬೇಡ ಎಂಬುದು ಅವರ ವಿನಂತಿ.
ಈಗಿರುವ ಈಗಾಗಲೇ ಇರುವ ಕಾರ್ಖಾನೆಗಳು ಪರಿಸರ ಮಾಲಿನ್ಯ ನಿಯಂತ್ರಣ ಮಾಡುವಂತೆ ಕಟ್ಟುನಿಟ್ಟಾಗಿ ಸೂಚಿಸಬೇಕು ಪರಿಸರ ಹಾನಿಯಾಗುವುದನ್ನು ತಪ್ಪಿಸಬೇಕು ಎಂದು ಗವಿಸಿದ್ದಪ್ಪ ರೆಡ್ಡಿ ಮಾರ್ಕಂಡಯ್ಯ ನಾಗರಾಜ ಅಜ್ಜಿ ಹನುಮಪ್ಪ ಎಂ.ಕೆ ಪರಸಪ್ಪ ಬಸನಗೌಡ ವೆಂಕೋಬರೆಡ್ಡಿ ದುರ್ಗಪ್ಪ ಗೊರವರ್ ಸೇರಿದಂತೆ ಒಟ್ಟು 27 ಜನ ಈ ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.
ಈಗ ಕಾರ್ಖಾನೆ ಆರಂಭವಾಗುವ ಹತ್ತಿರದ ಗ್ರಾಮದವರೆ ಈ ಕಾರ್ಖಾನೆ ಬೇಡ ಎಂದು ಕೂಗು ಎತ್ತಿರುವುದರಿಂದ ಕಾರ್ಖಾನೆಯ ಕಥೆ ಏನಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.