ಕೊಪ್ಪಳ ಜಿಲ್ಲೆಯ ಹಾಲಿ ಬಹುಪಾಲು ಜನಪ್ರತಿನಿಧಿಗಳಿಗೆ ಕನ್ನಡ ಮತ್ತು ಸಾಹಿತ್ಯದ ಬಗ್ಗೆ ಪ್ರೀತಿ ಅಭಿಮಾನ ಕಾಳಜಿ ಇಲ್ಲವೆ ?
ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಹೋಬಳಿ, ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡದ ಬಗ್ಗೆ ಸಾಹಿತ್ಯದ ಬಗ್ಗೆ ಇವರು ಆಡುವ ಭಯಂಕರ ಮಾತುಗಳು ಬರೀ ತೋರಿಕೆಯದ್ದು ಎಂಬುದು ಬುಧವಾರ ಕೊಪ್ಪಳದಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ ಸಂದರ್ಭದಲ್ಲಿ ಸಾಬೀತು ಆಯ್ತು.
ಏಕೆಂದರೆ ಆಹ್ವಾನ ಪತ್ರಿಕೆಯಲ್ಲಿದ್ದ ಹತ್ತು ಜನಪ್ರತಿನಿಧಿಗಳಲ್ಲಿ ಬಂದವರು ಇಬ್ಬರು ಮಾತ್ರ. ಅಕಾಡೆಮಿಗಳ ಕಾರ್ಯಕ್ರಮಗಳು ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕದಲ್ಲಿ ಮಾತ್ರ ನಡೆಯುತ್ತವೆ ಎಂಬ ಆರೋಪ ನಿವಾರಿಸುವಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸುಮಾರು 15 ವರ್ಷಗಳ ನಂತರ ಕೊಪ್ಪಳದಲ್ಲಿ ಗೌರವ ಪ್ರಶಸ್ತಿ ಸಾಹಿತ್ಯ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭವನ್ನು ಬುಧವಾರ ( ಜ. 22) ಶ್ರೀ ಶಿವಶಾಂತ ಮಂಗಲ ಭವನದಲ್ಲಿ ನಡೆಸಿತು.
ಕರ್ನಾಟಕದ ಬುದ್ದಿಜೀವಿ ವಲಯದ ಪ್ರಮುಖರಾದ ಅಗ್ರಹಾರ ಕೃಷ್ಣಮೂರ್ತಿ, ಆರ್.ಕೆ. ಹುಡಗಿ , ರಂಜಾನ್ ದರ್ಗಾ, ಇಂದಿರಾ ಹೆಗಡೆ, ಡಾ.ಅನಸೂಯ ಕಾಂಬಳೆ , ಡಾ. ರಾಜಶೇಖರ ಹತಗುಂದಿ ಸೇರಿದಂತೆ ಸಾಹಿತ್ಯ ವಲಯದ ಅನೇಕ ಮಹನೀಯರು ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ , ಬಹುಮಾನ ಸ್ವೀಕರಿಸಿದರು.
ಇದು ರಾಜ್ಯಮಟ್ಟದ ಮತ್ತು ಸರಕಾರವೇ ನಡೆಸುವ, ಸಾಹಿತ್ಯ ವಲಯದ ಅತ್ಯಂತ ಪ್ರಮುಖ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ಹಾಲಿ ಹತ್ತು ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು ಏಕೆಂದರೆ ಅದು ಪ್ರೊಟೋಕಾಲ್ . ಆದರೆ ಮಹತ್ವದ ಈ ಕಾರ್ಯಕ್ರಮಕ್ಕೆ ಬಂದಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ. ಇದು ಅವರದೆ ಇಲಾಖೆಯ ಕಾರ್ಯಕ್ರಮ ಅವರದೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಮತ್ತು ಅವರೆ ಪ್ರಶಸ್ತಿ ಪ್ರದಾನ ಮಾಡಬೇಕಾಗಿತ್ತು ಅವರು ಆಗಮಿಸಿದ್ದರು . ಈ ಕಾರ್ಯಕ್ರಮಕ್ಕೆ ಆಗಮಿಸಿದ ಇನ್ನೊರ್ವರು ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ. ಈ ಇಬ್ಬರು ಜನಪ್ರತಿನಿಧಿಗಳು ಬಿಟ್ಟರೆ ಉಳಿದ ಎಂಟು ರಾಜಕಾರಣಿಗಳು ಈ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಮೂಲಕ ತಮಗೆ ಸಾಹಿತ್ಯ ಸಂಸ್ಕೃತಿ ಮತ್ತು ಸಾಹಿತಿಗಳ ಬಗ್ಗೆ ಇರುವ ಪ್ರೀತಿ ಕಾಳಜಿ ಎಂಥದ್ದು ಎಂಬುದು ಈ ಕಾರ್ಯಕ್ರಮಕ್ಕೆ ಗೈರಾಗಿ ತೋರಿಸಿದರು ಎನ್ನಬಹುದು.
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ್ ಹಿಟ್ನಾಳ, ಕುಷ್ಟಗಿ ಶಾಸಕರು ವಿರೋಧ ಪಕ್ಷದ ಮುಖ್ಯ ಸಚೇತಕರು ದೊಡ್ಡನಗೌಡ ಪಾಟೀಲ್ , ಯಲಬುರ್ಗಾ ಶಾಸಕರು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಬಸವರಾಜ ರಾಯರೆಡ್ಡಿ , ಗಂಗಾವತಿ ಶಾಸಕ ಜನಾರ್ದನ ರೆಡ್ಡಿ , ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಸನಸಾಬ ದೋಟಿಹಾಳ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಶ್ರೀನಿವಾಸ ಗುಪ್ತಾ ಈ ಎಂಟು ಪ್ರಮುಖರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.
ಆ ಮೂಲಕ ಕನ್ನಡದ ಬಗ್ಗೆ , ಸಾಹಿತ್ಯದ ಬಗ್ಗೆ , ಸರಕಾರದ ಅಕಾಡೆಮಿಯ ಕಾರ್ಯಕ್ರಮದ ಬಗ್ಗೆ ತಮಗಿರುವ ಕಾಳಜಿ ಎಂಥದ್ದು ಎಂದು ತೋರಿಸಿಕೊಟ್ಟರು. ಇವರ ಗೈರು ಹಾಜರಿ ಸಾಹಿತ್ಯ ವಲಯದಲ್ಲಿ ಅಸಮಾಧಾನ ಹುಟ್ಟಿಸಿದೆ.