ಶನಿವಾರ ಕೊಪ್ಪಳದಲ್ಲಿ ಕೆಡಿಪಿ ಸಭೆ ಹಾಗೂ ಕೊಪ್ಪಳ-ಕಿನ್ನಾಳ ರಸ್ತೆ ಕಾಮಗಾರಿ ಭೂಮಿ ಪೂಜೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಶಿವರಾಜ್ ತಂಗಡಗಿ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಎರಡು ಸಲ ಜನರಿಂದ ತಡೆ ಎದುರಿಸಿದರು.
ಆದರೆ ಎರಡು ಕಡೆ ಅವರು ಕಾರಿನಿಂದ ಇಳಿಯದೆ ಕ್ಯಾರೆ ಎನ್ನಲಿಲ್ಲ.
ಕನಕಗಿರಿ ಯಿಂದ ಸರ್ಕ್ಯೂಟ್ ಹೌಸ್ ಗೆ ಬಂದ ಸಚಿವರು ಅಲ್ಲಿಂದ ಭಾಗ್ಯನಗರ ಕ್ರಾಸ್ ಹತ್ತಿರ ಕೊಪ್ಪಳ - ಕಿನ್ನಾಳ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ತೆರಳುವಾಗ ಟೀಚರ್ಸ್ ಕಾಲೋನಿ ಹತ್ತಿರ ಮಹಿಳೆಯರು ಕೈ ಹಿಡಿದು ರಸ್ತೆಗೆ ಅಡ್ಡ ನಿಂತಿದ್ದರು. ಇಂಥ ಅನಿರೀಕ್ಷಿತ ಸಂದರ್ಭದಿಂದ ಕ್ಷಣ ಕಾಲ ಏನೂ ಅರ್ಥ ಆಗದ ಸ್ಥಿತಿ.
ಆಗ ಸಚಿವರ ಕಾರಿನಿಂದ ಶಾಸಕ ರಾಘವೇಂದ್ರ ಹಿಟ್ನಾಳ ಇಳಿದು ಬಂದರು. ಮಹಿಳೆಯರು ಸಮಸ್ಯೆ ಹೇಳಿಕೊಳ್ಳುವ ಮುಂಚೆ ಶಾಸಕರು ಆಯ್ತು ಎಂದು ಸಿಡುಕಿದರು. ಇತ್ತ ಶಾಸಕರು ಮಹಿಳೆಯರೊಂದಿಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಅತ್ತ ಸಚಿವರ ಕಾರಿನ ಗ್ಲಾಸ್ ಏರಿತು.
ಶಾಸಕ ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮದ ಸ್ಥಳಕ್ಕೆ ಬನ್ನಿ ಎಂದು ಮಹಿಳೆಯರಿಗೆ ಹೇಳಿ ಸಚಿವರ ಕಾರಿನಲ್ಲಿ ಹೋದರು.
ಮಹಿಳೆಯರ ಆಕ್ರೋಶ ಅಂದ್ರೆ ಟೀಚರ್ಸ್ ಕಾಲೋನಿ ಹತ್ತಿರದ ಡಂಬಳ ಕಾಲೋನಿಯಲ್ಲಿ ಖಾಸಗಿಯವರ ಶುದ್ಧ ಕುಡಿಯುವ ನೀರಿನ ಘಟಕದ ನೀರು ರಸ್ತೆಗೆ ಬರುತ್ತಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಈ ಸಮಸ್ಯೆಗೆ ಶಾಸಕ, ಸಂಸದರು, ಪಟ್ಟಣ ಪಂಚಾಯತಗೆ ಹೇಳಿದರೂ ಬಗೆಹರಿದಿಲ್ಲ. ಹಾಗಾಗಿ ಇಂದು ಸಚಿವರ ಕಾರಿಗೆ ತಡೆ ಒಡ್ಡಿ ಗಮನ ಸೆಳೆಯುವ ಕೆಲಸ ಮಾಡಿದ್ದೇವೆ ಎಂದು ಮಹಿಳೆಯರು ಹೇಳಿದರು.
ರಸ್ತೆ ಕಾಮಗಾರಿ ಭೂಮಿ ಪೂಜೆ ನಂತರ ವಾಪಸ್ ಅದೇ ರಸ್ತೆಯಲ್ಲಿ ಸಚಿವರು ಬರುವಾಗ ಅಂಡರ್ ಪಾಸ್ ನಲ್ಲಿ ರಸ್ತೆ ಕಿತ್ತು ಹೋಗಿದ್ದರಿಂದ ತಿಂಗಳಿಗೆ ಹಲವಾರು ಜನ ತೊಂದರೆಗೆ ಈಡಾಗುತ್ತಿದ್ದಾರೆ ಇದನ್ನ ಅನೇಕ ಬಾರಿ ನಗರಸಭೆಗೆ ಶಾಸಕರ ಗಮನಕ್ಕೆ ತಂದರು ಸಮಸ್ಯೆ ಪರಿಹಾರ ಆಗಿಲ್ಲ. ಅದಕ್ಕೆ ಸಚಿವರ ಗಮನ ಸೆಳೆಯಲು ಸಮಾಜ ಸೇವಕ ಶಫೀಕ್ ಕೊಟ್ಟೂರು, ಇಬ್ರಾಹಿಂ ಪಟೇಲ್, ಕರಿಂ ಪಾಷಾ ಗಚ್ಚಿನಮನಿ, ಸಲೀಂ ಖಾದ್ರಿ ಸೇರಿದಂತೆ ಅನೇಕರು ಅಂಡರ್ ಪಾಸ್ ನಲ್ಲಿ ಸಚಿವರಿಗೆ ಮನವಿ ಮಾಡಿ ತಡೆದರು.
ಸಚಿವರಿಗೆ ಸಮಸ್ಯೆ ಹೇಳಿ ಸ್ಥಳ ನೋಡಲು ಕರೆದರು. ಆದರೆ ಕ್ಯಾರೆ ಎನ್ನದ ಸಚಿವರು ಕಾರಿನಿಂದ ಇಳಿಯಲಿಲ್ಲ.
ಸಚಿವರ ಕಾರಿನಲ್ಲೇ ಇದ್ದ ಶಾಸಕ ರಾಘವೇಂದ್ರ ಹಿಟ್ನಾಳ ಆಯ್ತು ಸಮಸ್ಯೆ ಬಗೆಹರಿಸೋಣ ಅಂತ ಸಿಡುಕಿದರು ಎಂದು ತಿಳಿದು ಬಂದಿದೆ.