ಕೊಪ್ಪಳ : 22 ವರ್ಷ ಸೈನ್ಯದಲ್ಲಿ ದೇಶ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಆಗಮಿಸಿದ ತಾಲೂಕಿನ ಗುಡಗೇರಿಯ ಯೋಧ ಶೇಖಪ್ಪ ಅವರಿಗೆ ಶನಿವಾರ ಬೆಳಗ್ಗೆ ರೈಲು ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ಕೋರಲಾಯಿತು.
ಗ್ರಾಮಸ್ಥರು, ಬಂಧು ಬಳಗ, ಕುಟುಂಬ, ಸ್ನೇಹಿತರು ಸೇರಿದಂತೆ ಅನೇಕರು ಶೇಖಪ್ಪ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಪ್ರೀತಿಯಿಂದ ಅಪುಗೆಯ ಸ್ವಾಗತ ಕೋರಿದರು. ಸೆಲ್ಫಿ ತೆಗೆದುಕೊಂಡರು. ಇಂದು ಅವರ ಹುಟ್ಟು ಹಬ್ಬವಾದ್ದರಿಂದ ಕೇಕ್ ಕತ್ತರಿಸಿ ಶುಭಾಶಯ ಕೋರಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶೇಖಪ್ಪ ಅವರು ' ನಾನು 2002 ರಲ್ಲಿ ಸೈನ್ಯಕ್ಕೆ ಸೇರಿದೆ. ನಾನು ಪುಣ್ಯವಂತ. 22 ವರ್ಷ 20 ದಿನ ದೇಶ ಸೇವೆ ಸಲ್ಲಿಸಿ ಸುರಕ್ಷಿತವಾಗಿ ಬಂದಿದ್ದೀನಿ.
ಯುವಕರು ಸೈನ್ಯ ಸೇರಬೇಕು. 'ಅಗ್ನಿವೀರ್ ' ಯುವಕರಿಗೆ ಉತ್ತಮ ಅವಕಾಶ' ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗುಡಗೇರಿ ಗ್ರಾಮದ ಮುಖಂಡ ಜಗದೀಶಗೌಡ ತೆಗ್ಗಿನಮನಿ- ನಮ್ಮ ಗ್ರಾಮ 8 ಯೋಧರನ್ನು ದೇಶ ಸೇವೆಗೆ ನೀಡಿದೆ. ಇದು ನಮ್ಮ ಜಿಲ್ಲೆ , ತಾಲೂಕು, ಗ್ರಾಮಕ್ಕೆ ಹೆಮ್ಮೆ. ಕೃಷಿಗೆ ರೈತ ದೇಶಕ್ಕೆ ಸೈನಿಕ ಬೇಕೆ ಬೇಕು, ಶೇಖಪ್ಪ ಅವರಿಗೆ ನಾವು ಆತ್ಮೀಯ ಸ್ವಾಗತ ಕೋರಿದ್ದೇವೆ' ಎಂದರು.
ರೈಲು ನಿಲ್ದಾಣದಿಂದ ರಾಷ್ಟ್ರ ಧ್ವಜದೊಂದಿಗೆ ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಶ್ರೀ ಗವಿಮಠ, ಹಿರೆಸಿಂದೋಗಿ ಮರುಳಸಿದ್ದೇಶ್ವರ ಮಠಕ್ಕೆ ತೆರಳಿ ಆಶಿರ್ವಾದ ಪಡೆದು ಅಳವಂಡಿ ಕಾರ್ಗಿಲ್ ಮಲ್ಲಯ್ಯ ಪ್ರತಿಮೆಗೆ ನಮಿಸಿ ಸ್ವಗ್ರಾಮ ಗುಡಗೇರಿ ತಲುಪಿದರು.