ನನ್ನ ಮಾತುಗಳು
ನನ್ನ ಬರವಣಿಗೆ ಆರಂಭವಾದದ್ದು ಎಂಭತ್ತರ ದಶಕದಲ್ಲಿ. ನಾನಾಗ ಪ್ರೌಢಶಾಲಾ ವಿದ್ಯಾರ್ಥಿ. ನಾ ಬರೆದ ಲೇಖನ, ಕವಿತೆಗಳ ಟಿಪ್ಪಣಿ ಕದ್ದು ನೋಡಿದ ಗೆಳೆಯ ನಮ್ಮ ವಿದ್ಯಾಗುರುಗಳಿಗೆ ತೋರಿಸಿದ್ದ. ನನಗೂ ಆ ನೋಟಪುಸ್ತಕದ ನೆನಪೇ ಇರಲಿಲ್ಲ. ಮೂರು ದಿನಗಳ ನಂತರ ವರ್ಗಕೋಣೆಯಲ್ಲಿ ನನ್ನ ಶಿಕ್ಷಕರು ಎದ್ದು ನಿಲ್ಲಿಸಿದರು. ನನ್ನ ನೋಟಪುಸ್ತಕ ಎಲ್ಲರಿಗೂ ತೋರಿಸಿದರು. ಎಲ್ಲ ಸಹಪಾಠಿಗಳಿಂದ ಚಪ್ಪಾಳೆ ಮೂಲಕ ನನ್ನನ್ನು ಅಭಿನಂದಿಸಲಾಯಿತು. ನಾನವತ್ತು 'ಕವಿ' ಎಂಬ ಬಿರುದಾಂಕಿತವನ್ನು ಪಡೆದುಕೊಂಡೆ. ಊರಲ್ಲೇ ಸುದ್ದಿಯಾಗಿ ಸಂಕೋಚ ನನ್ನಾವರಿಸಿತ್ತು. ಅಂದಿನಿಂದ ಶಾಲೆಯಲ್ಲೇ ವಿದ್ಯಾರ್ಥಿಗಳಿಂದ ಶಾಲಾ ಸಿಬ್ಬಂದಿಗಳಿಂದ ನಿತ್ಯವು ಗೌರವದ ಅಭಿದಾನ ಶುರುವಾಯಿತು. ಊರಲ್ಲಂತು ತೀರದ ಸಂಭ್ರಮ. ನಂತರದಲ್ಲಿ ಪತ್ರಿಕೆಗಳಿಗೆ ಬರೆಯತೊಡಗಿ ಎಲ್ಲಲ್ಲೂ ಪ್ರಸಾರವಾಯಿತು. ಬರವಣಿಗೆಯಿಂದ ನನಗೆ ಕುವೆಂಪು, ಹಾ.ಮಾ. ನಾಯಕ, ಪಿ. ಲಂಕೇಶ, ಚನ್ನವೀರ ಕಣವಿ, ಸಾರಾ ಅಬೂಬಕರ, ಟಿ. ವಿ. ಮಾಗಳದ, ಅಬ್ಬಾಸ ಮೇಲಿನಮನಿ, ಕೆ. ವಿರೂಪಾಕ್ಷಗೌಡ, ಹುರಕಡ್ಲಿ ಶಿವಕುಮಾರ, ಮಲ್ಲಿಕಾರ್ಜುನ ಹಿರೇಮಠ, ಸತೀಶ ಕುಲಕರ್ಣಿ, ಚನ್ನಪ್ಪ ಅಂಗಡಿ, ವಿಜಯಕಾಂತ ಪಾಟೀಲ, ಡಾ|| ಪ್ರದೀಪಕುಮಾರ ಹೆಬ್ರಿ, ಸಿದ್ಧರಾಜ ಪೂಜಾರಿ, ಹರಿನಾಥಬಾಬು ಮುಂತಾದವರ ಪರಿಚಯ ನಿಕಟವಾಯಿತು.
ಒಬ್ಬ ಬರಹಗಾರನಿಗೆ ಸಂಪಾದನೆ ಎಂದರೆ ವೈಚಾರಿಕ, ವೈಜ್ಞಾನಿಕ, ಮಾನವತೆಯ ವ್ಯಕ್ತಿಗಳು ಸಿಕ್ಕುವುದು. ಸಾಮಾಜಿಕ, ಸಾಂಸ್ಕೃತಿಕ ವಲಯ ದಕ್ಕುವುದು ಎರಡೂ ಜವಾಬ್ದಾರಿಯ ಕೆಲಸವಾಗಿದೆ. ಅದನ್ನು ಸೈದ್ಧಾಂತಿಕವಾಗಿ ಬದ್ಧತೆಯಿಂದ ನಮ್ಮ ನಡೆಯಲ್ಲು ನುಡಿಯಲ್ಲು ಉಳಿಸಿಕೊಳ್ಳಬೇಕಾದ ಹಿತ ಲೇಖಕನದು.
- ಅಕ್ಬರ ಸಿ. ಕಾಲಿಮಿರ್ಚಿ 9732327829
( ಜೀವ ಮೀಡಿತಗಳ ಧ್ಯಾನ ಕೃತಿಯಿಂದ )