ಕೊಪ್ಪಳ: ತಾಲೂಕಿನ ಮುದ್ದಾಬಳ್ಳಿ-ಗೊಂಡಬಾಳ ಹತ್ತಿರ ಸಕ್ಕರೆ ಕಾರ್ಖಾನೆಗೆ ಎನ್‌ಒಸಿ ಕೊಡಬಾರದು ಹಾಗೂ ಕೂಡಲೇ ಗ್ರಾಮ ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಪಡೆಯುಬೇಕು ಎಂದು ಮುದ್ದಾಬಳ್ಳಿಯ ಜನ ಶುಕ್ರವಾರ ಗೊಂಡಬಾಳ ಗ್ರಾಪಂ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.
ಈ ಕಾರ್ಖಾನೆ ನಮ್ಮೂರಿನಿಂದ ಅರ್ಧ ಕಿ.ಮೀ ದೂರದಲ್ಲಿ ತಳವೂರುತ್ತದೆ. ಇದರಿಂದ ಫಲವತ್ತಾದ ನೀರಾವರಿ ಭೂಮಿ ಮತ್ತು ಪರಿಸರ ಹಾಳಾಗಲಿದೆ. ಕಾರ್ಖಾನೆ ಉದ್ದೇಶದ ಜಾಗದಲ್ಲಿ ಸರ್ಕಾರಿ ಪ್ರೌಢ ಶಾಲೆ ಮಂಜೂರಾಗಿದೆ ಹಾಗೂ ಮೊರಾರ್ಜಿ ವಸತಿ ಶಾಲೆ ಆರಂಭಕ್ಕೆ ಸರ್ಕಾರ ಅನುಮೋದನೆ ನೀಡಿದೆ.
ಈ ಕಾರ್ಖಾನೆ ಜಾಗದಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ 200 ಮೀ ದೂರದಲ್ಲಿದ್ದು ಕಾರ್ಖಾನೆ ಸ್ಥಾಪನೆಯಿಂದ ತುಂಗಭದ್ರ ನದಿ, ಬೋರ್ ವೆಲ್ ನೀರು ಮಾಲಿನ್ಯ ಆಗುತ್ತೆ. ಇದು ರೋಗರುಜಿನಕ್ಕೂ ಕಾರಣ ಆಗುವುದರಿಂದ
ಕಾರ್ಖಾನೆಗೆ ಎನ್‌ಒಸಿ ಯಾವುದೇ ಕಾರಣಕ್ಕೂ ನೀಡಬಾರದು.
2023 ರಲ್ಲಿ ಪರಿಸರ ಇಲಾಖೆ ನಡೆಸಿದ ಅಹವಾಲು ಸಭೆಯಲ್ಲಿ ಇಲ್ಲಿ ಕಾರ್ಖಾನೆ ಬೇಡವೆ ಬೇಡ ಎಂದಿದ್ದೇವೆ. ಆದರೂ ಸರ್ಕಾರ ಮೆ. ಯುಕೆಇಎಮ್ ಅಗ್ರಿ ಇನ್ಪ್ರಾ ಲಿ ಕಂಪನಿಗೆ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಿದೆ. ಕಂಪನಿ ಗ್ರಾಪಂಗೆ ಎನ್‌ಒಸಿಗಾಗಿ ಅರ್ಜಿ ಸಲ್ಲಿಸಿದೆ. ಕೂಡಲೇ ಮುದ್ದಾಬಳ್ಳಿಯಲ್ಲಿ ಗ್ರಾಮ ಸಭೆ ನಡೆಸಿ ಜನರ ಅಭಿಪ್ರಾಯ ಪಡೆಯಬೇಕು. ಗ್ರಾಪಂ ಜನರ ಹಿತ ಕಾಪಾಡಲು ಮುಂದಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಕಾರ್ಖಾನೆ ಸ್ಥಾಪನೆಗೆ ತಕರಾರನ್ನು ಪ್ರತ್ಯೇಕವಾಗಿಯೇ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನಗೌಡ್ರ ಪಾಟೀಲ್, ಶರಣಗೌಡ್ರ ಪಾಟೀಲ್, ಸಂಗಣ್ಣ ನಾಗರಳ್ಳಿ, ಸುರೇಶರಡ್ಡಿ ಮಾದಿನೂರು, ಸಣ್ಣ ಹನುಮಪ್ಪ ಹುಳ್ಳಿ, ಸುರೇಂದ್ರಗೌಡ್ರ ಪಾಟೀಲ್, ರಾಜೀವ್ ರಡ್ಡಿ ಮಾದಿನೂರು, ಈರಣ್ಣ ಮಾಳೆಕೊಪ್ಪ, ಪ್ರಕಾಶ ಹಾಲವರ್ತಿ, ಗವಿಸಿದ್ದನಗೌಡ ಪಾಟೀಲ್, ಮೈಲಾರಪ್ಪ ಗೊಂಡಬಾಳ, ಗ್ರಾಪಂ ಸದಸ್ಯರಾದ ಶೇಖರಯ್ಯ ಇನಾಮದಾರ್, ನಾಗರಾಜ ಜಿ, ಗವಿಸಿದ್ದಪ್ಪ ಕುಂಬಾರ ಸೇರಿದಂತೆ ಇತರರು ಇದ್ದರು.