ನನ್ನ ಬದುಕು ಹಾಗೂ ಭವಿಷ್ಯಕ್ಕಾಗಿ ದಿನವೂ ಹೋರಾಡುತ್ತಿದ್ದೆ . ಆರ್ಥಿಕ ಸಂಕಷ್ಟದಿಂದಾಗಿ ಬಳಲುತ್ತಿದ್ದೆ . ವ್ಯವಹಾರದ ಜೊತೆ ಮಕ್ಕಳಿಗೆ ನಿರಂತರ ಪಾಠ ಹೇಳುವ ರೂಢಿ . ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಮೂಡಿಸುತ್ತ ಅಕ್ಷರಗಳ ಕಲಿಸುತ್ತ ಬಂದಿರುವೆ.
ಎಂದಿನಂತೆ ನಾನು ಪಾಠ ಮಾಡುವ ಬಯಲು ಸ್ಥಳದಲ್ಲಿ ನಾಯಿಯ ಮರಿ ಕುಳಿತಿತ್ತು . ಮಕ್ಕಳು ಸಹ ಆ ನಾಯಿಮರಿ ನೋಡುತ್ತ ಖುಷಿ ಪಡುತ್ತಿದ್ದವು . ನಾನು ಆ ನಾಯಿ ಮರಿ ತಂಟೆಗೆ ಹೋಗದೇ ಮಕ್ಕಳಿಗೆ ಪಾಠ ಮಾಡಿದೆ . ಮಕ್ಕಳಿಗೆ ಓದಿಸಿ ಬರೆಯಿಸಿ ಅವರನ್ನೆಲ್ಲ ಮನೆಗಳಿಗೆ ಬೀಳ್ಕೊಟ್ಟು ನಾನು ಮನೆಗೆ ಹಿಂತಿರುಗಿದೆ . ಆ ಮರಿ ನನ್ನ ಹತ್ತಿರ ಬಂದು ಬಾಲ ಅಲ್ಲಾಡಿಸಿ ಅಲ್ಲೇ ಕುಳಿತಿತ್ತು . ಹೀಗೆ ವಾರ ಕಳೆದಿರಬಹುದು . ದಿನವೂ ನಾನು ಪಾಠ ಮಾಡುವ ಜಾಗದಲ್ಲೇ ನಿತ್ಯ ಇರುತ್ತಿತ್ತು . ನನಗೂ ಆ ನಾಯಿ ಮರಿಯ ಮೇಲೆ ಮಮಕಾರ ಬಂತು . ಪ್ರೀತಿಯಿಂದ ಅದನ್ನು ಮನೆಗೆ ಕರೆ ತಂದೆ . ಬಣ್ಣ ತೀರಾ ಕಪ್ಪು , ಕಿವಿ ದೊಡ್ಡವು. ನೋಡಲು ಚೂಟಿಯಾಗಿತ್ತು . ಅದಕ್ಕೆ ಮೊದಲು ತಿನ್ನಿಸಿದ್ದು ಬೆಲ್ಲವನ್ನು , ಬೆಲ್ಲ ಹಾಕಿದರೆ ನಾಯಿ ಮನೆ ಬಿಟ್ಟು ಹೋಗದೆಂಬ ನಂಬಿಕೆಯ ಮಾತುಗಳಿಂದ ನಾನೂ ಹಾಗೆ ಮಾಡಿದೆ .
ಹಸಿವಿನ ಸಂಕಟಕ್ಕೆ ಏನೆಲ್ಲ ತಿನ್ನುವ ತಿರುಗುವ ಚಟ ಪ್ರಾಣಿಗಳಿಗೆ. ದಾರಿಯಲ್ಲಿನ ವಸ್ತು , ಗಾಡಿಗಳ , ಸ್ಥಳಗಳ ಮೂಸಿಸುವ ರೂಢಿ ಪ್ರಾಣಿಗಳ ಆಜನ್ಮ ಸಿದ್ಧ ಹಕ್ಕು . ಈಗ ನಾಯಿ ಸಾಕುವ ಫ್ಯಾಶನ್ ಶುರುವಾಗಿದೆ . ಹಿಂದೆಲ್ಲ ನಾಯಿಯನ್ನು 'ಕಾವಲುಗಾರ' ನ್ನಾಗಿಸುತ್ತಿದ್ದರು . ತೋಟದ ಬೆಳೆ , ಮನೆಯ ವಸ್ತು ಕಾಯಲು ಕುರಿಗಾಯಿಗಳು ಮೇಕೆ , ಕುರಿಮರಿಗಳ ಹಟ್ಟಿ ಕಾಯಲು ಸಾಕುತ್ತಿದ್ದರು. ಬೀದಿ ನಾಯಿಗಳಂತೂ ತಮಗೆ ಹಿತವಾದ ಸುರಕ್ಷೆಯ ಜಾಗ ನೋಡಿಕೊಂಡು ತಮ್ಮಷ್ಟಕ್ಕೆ ಬದುಕುವ ಪರಿಪಾಠ ಮಾಡಿಕೊಂಡಿರುತ್ತವೆ . ಮಕ್ಕಳ ಹಿಂಡು ಕೂಡಿದಾಗ ಆಟ ಆಡಲು ಮೊದಲು ಎತ್ತಿಕೊಳ್ಳುವ , ಕೈಗೆಟುಕುವ ಪ್ರಾಣಿ ಈ ನಾಯಿ ಮರಿ. ಮುದ್ದಾಗಿ ಕಾಣುವ , ಪ್ರೀತಿಸತೊಡಗುವ ಮೊದಲು ಜೀವಿಗಳಲ್ಲಿ ಈ ನಾಯಿಮರಿಯೇ , ಹೀಗಾಗಿ ಮಕ್ಕಳ ಹಠ ಅಳು ಶುರುವಾದಾಗ , ಮಕ್ಕಳಿಗೆ ಉಣ್ಣಿಸುವಾಗೆಲ್ಲ ' ನಾಯಿ ಬಂತು ನೋಡು ' ಎಂಬ ಉದ್ಗಾರವೇ ಹೊರಡುತ್ತದೆ . ಮನುಷ್ಯನಿಗಿಂತ 'ವಿಶ್ವಾಸಿಕ ' ನಾಯಿ ಎಂಬ ಮಾತು ಜನಜನಿತ .
ನನಗೆ ಸಿಕ್ಕ ' ನಾಯಿ ಮರಿ'ಗೆ ನಾವು 'ಮ್ಯಾಗಿ ' ಅಂತ ಹೆಸರಿಟ್ಟೆವು . ಆ ಮರಿ ಬಾಲ ಅಲ್ಲಾಡಿಸುತ ಕಿವಿ ನಿಮಿರಿಸುತ್ತ ಪುಟ್ಟ ಹೆಜ್ಜೆಯಿಂದ ಕುಣಿವ ನೋಟ ಬಹಳ ಸೊಗಸಾಗಿತ್ತು . ಯಾರಾದರೂ ದಾರೀಲಿ ಹೋಗುತ್ತಿದ್ದರೆ ಇದನ್ನು ನೋಡಿ ಎಲ್ಲಿ ತಂದಿರುವಿರಿ ? ಮುಧೋಳ ನಾಯಿಯೇ ಎಂಬ ಪ್ರಶ್ನೆ ! ನಾವು ಎಷ್ಟೇ ಉತ್ತರ ನೀಡಿದರೂ ಎಲ್ಲರೂ ತಿಳಿದುಕೊಂಡಿದ್ದು ಇದು ಮುಧೋಳ ನಾಯಿ ಅಂತ . ಪುಟ್ಟ ಕುಟುಂಬದ ನಮ್ಮ ಮನೆಯಲ್ಲಿ ಈ 'ಮ್ಯಾಗಿ' ಯನ್ನು ಕಟ್ಟಿ ಹಾಕದೆ ಹಾಗೆಯೇ ಬೆಳೆಸಿದೆವು . ಮನೆಯ ಸದಸ್ಯರ ಜೊತೆ ಇದು ಕೂಡ ಒಂದಾಗಿ ಬಿಟ್ಟಿತು . ಈ ಮ್ಯಾಗಿಯ ಮೈ ಬಣ್ಣ ಕಪ್ಪಾದ ಕೂದಲು ಉದ್ದುದ್ದ ಕಿವಿ , ಎತ್ತರವಾದ ನಿಲುವು ಕೆಂಪಾದ ಕಣ್ಣು , ಚೂಪಾದ ಮುಖ . ಅದರ ತೀಕ್ಷ್ಯ ದೃಷ್ಟಿಗೆ ಮನೆಗೆ ಬಂದವರು , ದಾರಿ ಹೋಕರು ಹೆದರುತ್ತಿದ್ದರು. ಈ 'ಮ್ಯಾಗಿ' ಯೋ ಸಾದಾ ಸ್ವಭಾವದ ಅತೀ ವಿನಯದ್ದು . ನಾಯಿ ಎಂದರೆ ಸಹಜವಾಗಿ ಎಲ್ಲರಿಗೂ ಭಯವೇ . ಸಾಕಿದವರಿಗಷ್ಟೇ ಅದರ ಗುಣ ಸ್ವಭಾವ ಗೊತ್ತು . ಹೀಗಾಗಿ ಹೆದರಿಕೆ ಎಂಬುದು ಹೊರ ಜಗತ್ತಿನವರಿಗೆ 'ನಾಯಿ' ಬಗ್ಗೆ ಇದ್ದೇ ಇರುತ್ತದೆ .
ನಮ್ಮ ಈ 'ಮ್ಯಾಗಿ' ಗೆ ಮೈ ತೊಳೆದವರೆಂದರೆ ಅದರ ನವೀರಾದ ಕೂದಲು ಬಹಳ ಮಿಂಚುತ್ತಿದ್ದವು . ಇದನ್ನು ತದೇಕ ಚಿತ್ತದಿ ನೋಡುತ್ತಿದ್ದರೆ ನೋಡುತ್ತಲೇ ಇರಬೇಕೆನಿಸುತ್ತಿತ್ತು . ಮನೆ ಮಂದಿಗೆ 'ಮಗು' ವಿನಂತೆ ಭಾಸವಾಗಿತ್ತು . ಅಕ್ಕ - ಪಕ್ಕದ ಮನೆಯವರು ತಿಂಡಿ ತಿನಿಸು ಆಹಾರ ತಂದಿಟ್ಟರೆ ತಿನ್ನುತ್ತಿರಲಿಲ್ಲ . ನಮ್ಮನ್ನೇ ನೋಡುತ್ತಿತ್ತು ಅಪ್ಪಣೆಗಾಗಿ , ಊರಿಗೆ ಹೋಗಬೇಕಾದ ಸಂದರ್ಭದಲ್ಲಿ 'ಮ್ಯಾಗಿ ' ಬಿಟ್ಟು ಹೊರಡಲು ಸಂಕಟವಾಗುತ್ತಿತ್ತು . ಯಾಕಾದರೂ ಸಾಕಿದೆವೋ ಎಂಬ ಭಾವ , ಪಕ್ಕದ ಮನೆಯವರಿಗೆ ಊಟ ಹಾಕಲು ಹೇಳುತ್ತಿದ್ದೆವಾದರೂ ನಾವು ಬರುವವರೆಗೆ ಯಾರೇ ಊಟ ಹಾಕಿದರೂ ತಿನ್ನುತ್ತಿರಲಿಲ್ಲ . ಅದು ಉಪವಾಸ ಮಾಡುವುದ ನೋಡಿ ನಮಗೆ ಮನಸು ತುಂಬಿ ಬರುತ್ತಿತ್ತು . ನಮಗೆ ಮೇಲಿಂದ ಮೇಲೆ ಬರುತ್ತಿರುವ ಕಷ್ಟಗಳು, ಊರಿಗೆ ಹೊರಡಲೇಬೇಕಾದ ಅನಿವಾರ್ಯತೆಗೆ ನಮ್ಮ ಮೇಲೆ ನಮಗೆ ಬೇಸರ ಬರುತ್ತಿತ್ತು . ' ಮ್ಯಾಗಿ' ಒಂದನ್ನೇ ಬಿಟ್ಟು ಹೊರಡಬೇಕಾದಾಗ ಕರುಳು ಚುರ್ ಎನ್ನುತ್ತಿತ್ತು . ಅದಕ್ಕಾದರೂ ಹೇಳಿಕೊಳ್ಳಲು ಬಾಯಿಯೇ ಇಲ್ಲ . ಮಾತು ಬಂದಿದ್ದರೆ ಯಾರಾದರೂ ಸಾಕಲು ಸಾಧ್ಯವೇ ? ಆದರೂ ಅದನ್ನೊಮ್ಮೆ ಮನೆಯ ಸದಸ್ಯನಾಗಿರಿಸಿದ್ದಕ್ಕೆ ಅಪ್ಪಣೆ ಕೇಳಿ ಮೈ ಸವರಿ, ಮುಖ ಮುದ್ದಿಸಿ , ಕಾಲುಗಳ ಮುಟ್ಟಿ , ಥ್ಯಾಂಕ್ಯೂ ನೀಡಿ ಹೊರಡುತ್ತಿದ್ದೇವು . ನಾಲ್ಕು ಹೆಜ್ಜೆ ಅಡಿಯಿಡುತ್ತಿದ್ದಂತೆ 'ಕುಂಯಿ ಕುಂಯಿ ' ಎನ್ನುತ್ತಿತ್ತು . ನಾನು ಬರಲೇ ? ಅಥವಾ ಹೋಗಿ ಬನ್ನಿ ಎಂಬ ಮಾತೋ ಏನೋ ಒಟ್ಟಾರೆ ಮೈ ಪುಳಕವಾಗುತ್ತಿತ್ತು .
ನಮಗೂ ಕೆಟ್ಟ ಸಂದರ್ಭ . ಮನೆಯಲ್ಲೊಬ್ಬರು ತೀರಿಕೊಂಡಿದ್ದರು. ನಾಲ್ಕು ದಿನ ಊರಿಗೆ ಹೋದೆವು . ಎಲ್ಲ ಮುಗಿಸಿ ಮರಳಿ ಬಂದಾಗ ಮನೆ ಮುಂದೆ 'ಮ್ಯಾಗಿ ' ಇರಲಿಲ್ಲ . ಹಾಕಿದ್ದ ಅನ್ನ , ರೊಟ್ಟಿ , ನೀರು ಹಾಗೇ ಇತ್ತು . ಸುತ್ತಲು ನೋಡಿದೆವು ಕಾಣಲಿಲ್ಲ . 'ಮ್ಯಾಗಿ ' ಎಂದು ಜೋರಾಗಿ ಕೂಗಿದೆವು . ದೂರದ ಜಾಲಿ ಗುಂಪಿನ ಪೊದೆಯೊಂದರಿಂದ ' ಕುಂಯೀ ' ಎಂಬ ಶಬ್ದ ಕೇಳಿತು . ಸ್ವಲ್ಪ ಸಮಯದ ನಂತರ ನಮಗೆಲ್ಲ ಆಘಾತ , ಉರುಳುತ್ತ ನರಳುತ್ತ ಹತ್ತಿರ ಬಂದು ಮನೆ ಬಾಗಿಲಿನ ಹೊಸಲಿಗೆ ಹಣೆ ಇಟ್ಟು ಒಮ್ಮೆ ನಮ್ಮೆಲ್ಲರ ದಿಟ್ಟಿಸಿ ಕಣ್ಣ ಹನಿ ಚಿಮ್ಮಿಸಿತು . ನಮಗೆ ದುಃಖದ ಕಟ್ಟೆ ಒಡೆದು ಮೈಯಲ್ಲ ಸವರಿ , ಬಾಯಿಯೊಳಗೆ ನೀರು ಹಾಕಿದೆವು . ಮ್ಯಾಗಿ ಕಣ್ಣು ಮುಚ್ಚಿತು . ಮೈ ತಣ್ಣಗಾಯಿತು . ಮ್ಯಾಗಿ ಇನ್ನಿಲ್ಲವಾಯಿತು . ಅದಕ್ಕೆ ಯಾರೋ ವಿಷ ಉಣ್ಣಿಸಿದ್ದರು .
ಯಾರ ಮೇಲೂ ಪೌರುಷ ತೋರದೆ ಅತ್ತು ಅತ್ತು ಸುಮ್ಮನಾದೆವು .
ಈಗ ಅದರ ನೆನಪಷ್ಟೇ ಉಳಿದಿದೆ .
- ಅಕ್ಬರ್ ಕಾಲಿಮಿರ್ಚಿ ಭಾಗ್ಯನಗರ-ಕೊಪ್ಪಳ