ಕೊಪ್ಪಳ : ಇದೇ ತಿಂಗಳು ಜ. 27 ರಂದು ವಿಧಾನಸೌಧದ ಮುಂದೆ ತಾಯಿ ಭುವನೇಶ್ವರಿ ದೇವಿ ಪ್ರತಿಮೆ ಅನಾವರಣ ಸಂಭ್ರಮದಿಂದ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಹೇಳಿದರು.
ಬುಧವಾರ ಕೊಪ್ಪಳದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಆಗಿರುವ ಸಂದರ್ಭ ತಾಯಿ ಭುವನೇಶ್ವರಿ ಪ್ರತಿಮೆ ಅನಾವರಣ ಆಗುತ್ತಿರುವುದು ನನ್ನ ಅದೃಷ್ಟ ಇದು ಖುಷಿ ತಂದಿದೆ.
ನನ್ನದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯ್ಕೆ ಮಾಡುವ ರಾಜ್ಯೋತ್ಸವ ಪ್ರಶಸ್ತಿ , ಅಕಾಡೆಮಿಯ ಪ್ರಶಸ್ತಿಗಳಿಗೆ ಆಯ್ಕೆ ಸಂದರ್ಭ ನಾನು ಭಾಗವಹಿಸುವುದಿಲ್ಲ. ಯಾರ ಹೆಸರನ್ನು ಶಿಫಾರಸ್ಸು ಮಾಡುವುದಿಲ್ಲ. ಪಾರದರ್ಶಕವಾಗಿ ಅರ್ಹರನ್ನು ಆಯ್ಕೆ ಮಾಡಿ ಎಂದು ನಾನು ದೂರ ಇರುತ್ತೇನೆ.
ಹಿಂದಿನ ಸರ್ಕಾರ ಅಕಾಡೆಮಿಗಳಿಗೆ ಅಧ್ಯಕ್ಷರು ಸದಸ್ಯರನ್ನು ನೇಮಕ ಮಾಡಲಿಲ್ಲ ಪ್ರಶಸ್ತಿ ಸಮಾರಂಭಗಳನ್ನು ಮಾಡಲಿಲ್ಲ. ಈಗ ನಮ್ಮ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅಕಾಡೆಮಿ ಪ್ರಾಧಿಕಾರಗಳಿಗೆ ಅಧ್ಯಕ್ಷರು ಸದಸ್ಯರ ನೇಮಕ ಮಾಡಿದ್ದೇವೆ. ಈ ಹಿಂದೆ 2013 ರಿಂದ 2018 ರವರೆಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಅಕಾಡೆಮಿಗಳಿಗೆ 1 ಕೋಟಿ 10 ಲಕ್ಷ ರೂಪಾಯಿ ಅನುದಾನ ಕೊಟ್ಟಿದ್ದರು..
ನಂತರ ಬಂದ ಸರ್ಕಾರ ಅನುದಾನವನ್ನು 60 ಲಕ್ಷಕ್ಕೆ ಇಳಿಸಿದರು. ಈಗ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಅಕಾಡೆಮಿಗಳಿಗೆ 80 ಲಕ್ಷ ರೂಪಾಯಿ ಕೊಡ್ತಾ ಇದ್ದಾರೆ. ವಿಶೇಷ ಕಾರ್ಯಕ್ರಮಗಳನ್ನು ಮಾಡಿದರೆ ವಿಶೇಷ ಅನುದಾನ ಬಿಡುಗಡೆ ಮಾಡುತ್ತೇವೆ
ಹಿಂದೆಲ್ಲ ರಾಜ್ಯೋತ್ಸವ ಪ್ರಶಸ್ತಿ ಅಕಾಡೆಮಿ ಅಧ್ಯಕ್ಷತೆ ಸದಸ್ಯತ್ವಗಳು ಉತ್ತರ ಕರ್ನಾಟಕ ಭಾಗಕ್ಕೆ ನಿಲುಕದ ನಕ್ಷತ್ರಗಳಾಗಿದ್ದವು. ಈಗ ನಮ್ಮ ಅವಧಿಯಲ್ಲಿ ನಮ್ಮ ಭಾಗದವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಅರ್ಹತೆ ಆಧಾರದಲ್ಲಿ ಪಾರದರ್ಶಕವಾಗಿ ಪ್ರಶಸ್ತಿಗೆ ಆಯ್ಕೆ ಮಾಡುತ್ತಿದ್ದೇವೆ ಎಂದು ಶಿವರಾಜ ತಂಗಡಗಿ ಹೇಳಿದರು.