ಕೊಪ್ಪಳ : ಎಲ್ಲ ಸರ್ಕಾರಿ ನೌಕರರ ಆಸ್ತಿ ವಿವರ ನೀಡುವಂತೆ ಲೋಕಾಯುಕ್ತವು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು ಈ ಮಾಹಿತಿ - ಆಸ್ತಿ ವಿವರ ನೀಡಬಾರದು ಮತ್ತು ಲೋಕಾಯುಕ್ತರ ಪ್ರಸ್ತಾವನೆ ಒಪ್ಪಬಾರದು ಒಂದು ವೇಳೆ ಒಪ್ಪಿದರೆ ಪ್ರತಿಭಟನೆ ಮಾಡುತ್ತೇವೆ ಎಂದು ಸಚಿವಾಲಯದ ನೌಕರರು ತಿಳಿಸಿದ್ದು ನೌಕರರ ನಡೆಯನ್ನು ನಮ್ಮ ಪಕ್ಷ ಖಂಡಿಸುತ್ತದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷರಾದ ಆಶಾ ವೀರೇಶ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರದ ಎಲ್ಲ ನೌಕರರು ಮತ್ತು ಅಧಿಕಾರಿಗಳು ಪ್ರತಿ ವರ್ಷ ಆಸ್ತಿ ವಿವರ ಲೋಕಾಯುಕ್ತರಿಗೆ ಸಲ್ಲಿಸಬೇಕು ಮತ್ತು ಅದು ಸಾರ್ವಜನಿಕರಿಗೂ ಲಭ್ಯ ಆಗ್ಬೇಕು ಈ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಆಗಬೇಕು.
ಕೇಂದ್ರ ಸರಕಾರದ ನೌಕರರು ಪ್ರತಿ ವರ್ಷ ಆಸ್ತಿ ವಿವರ ಸಲ್ಲಿಸುತ್ತಾರೆ. ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ ಸಂಬಳ ಮತ್ತು ಸವಲತ್ತು ಕೇಳುವ ರಾಜ್ಯ ಸರ್ಕಾರಿ ನೌಕರರು ಕೇಂದ್ರ ಸರಕಾರಿ ನೌಕರರಂತೆ ತಾವು ಆಸ್ತಿ ವಿವರ ಸಲ್ಲಿಸುವ ವ್ಯವಸ್ಥೆ ಇರಬಾರದು ಎನ್ನುವುದು ಸರಿಯಲ್ಕ.
ಈಗಾಗಲೇ ಗ್ರಾಮ ಪಂಚಾಯತಿ ಸದಸ್ಯರಿಂದ ಆರಂಭಿಸಿ ರಾಜ್ಯದ ಎಲ್ಲ ಜನಪ್ರತಿನಿಧಿಗಳು ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸುತ್ತಾರೆ. ಈ ನಿಯಮ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ಅನ್ವಯ ಆಗಬೇಕು. ಜೊತೆಗೆ ಇವರೆಲ್ಲರ ಆಸ್ತಿ ವಿವರ ಸಾರ್ವಜನಿಕ ಪೋರ್ಟಲ್ ನಲ್ಲಿ ಲಭ್ಯ ಆಗಬೇಕು. ಲೋಕಾಯುಕ್ತರು ಈಗ ಕೇಳಿರುವ ಆಸ್ತಿ ವಿವರ ಪ್ರಸ್ತಾವನೆ ಸರಿಯಾಗಿದೆ.
ಸರ್ಕಾರ ನೌಕರರಂತೆ ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರು ಕೂಡ ತಮ್ಮ ಆಸ್ತಿ ವಿವರವನ್ನು ಪ್ರತಿ ವರ್ಷ ರಾಜ್ಯಪಾಲರಿಗೆ ಸಲ್ಲಿಸಿ ಲೋಕಾಯುಕ್ತದ ಜಾಲತಾಣದಲ್ಲಿ ಪ್ರಕಟಿಸಿ ಸರ್ಕಾರ ನೌಕರಿಗೆ ಮಾದರಿಯಾಗಬೇಕು ಎಂದು ಆಶಾ ವೀರೇಶ್ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಹೆಚ್. ಗೊಡಚಳ್ಳಿ , ಗಣೇಶ್ ಹಾಗೂ ಸಾರಂಗಿ ಗಣೇಶ್ , ಗಂಗಾವತಿ ತಾಲೂಕು ಕಾರ್ಯದರ್ಶಿ ಮಹಮ್ಮದ್ ಹುಸೇನ್ ಉಪಸ್ಥಿತರಿದ್ದರು.