ಕೊಪ್ಪಳ : ಕುಷ್ಟಗಿ ರಸ್ತೆಯ ಮೇಲ್ಸೇತುವೆಯನ್ನು ರೈಲ್ವೆ ಹಾಗೂ ಜಲ ಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಇಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಸಂಗಣ್ಣ ಕರಡಿ ಕಾರ್ಯಕ್ರಮಕ್ಕೆ ಗೈರು ಆಗಿದ್ದರು. ಇನ್ನೊರ್ವ ಮಾಜಿ ಸಂಸದರಾದ ಶಿವರಾಮಗೌಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಸಚಿವರಾದ ವಿ. ಸೋಮಣ್ಣ ಅವರನ್ನು ಖಾಸಗಿ ಹೋಟೆಲ್ ನಲ್ಲಿ ಭೇಟಿಯಾದ ಸಂಗಣ್ಣ ಕರಡಿ ಸಚಿವರನ್ನು ಸ್ವಾಗತಿಸಿ ಕೂಡಲೆ ಅಲ್ಲಿಂದ ನಿರ್ಗಮಿಸಿದರು ಎಂದು ತಿಳಿದು ಬಂದಿದೆ.
ಸಂಗಣ್ಣ ಕರಡಿ ಲೋಕಸಭಾ ಸದಸ್ಯರ ಅವಧಿಯಲ್ಲಿ 2021 ರಲ್ಲಿ ರೈಲ್ವೆ ಮೇಲ್ಸೇತುವೆ ಮಂಜೂರಾಗಿತ್ತು. ಇದೇ ತಿಂಗಳು 7 ರಂದು ಸಂಸದ ರಾಜಶೇಖರ ಹಿಟ್ನಾಳ ಜೊತೆ ಇದೇ ಸೇತುವೆ ಉದ್ಘಾಟನೆಗೆ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಪ್ರೊಟೊಕಾಲ್ ಪಾಲನೆಯಾಗಿಲ್ಲದ್ದಕ್ಕೆ ಮೇಲ್ಸೇತುವೆ ಉದ್ಘಾಟನೆ ಬದಲು ರಸ್ತೆಗೆ ನಾಮಕರಣ ಕಾರ್ಯಕ್ರಮ ಜರುಗಿತ್ತು.
ಇಂದಿನ ಕಾರ್ಯಕ್ರಮಕ್ಕೆ ಮಾಜಿ ಸಂಸದ ಸಂಗಣ್ಣ ಕರಡಿ ಗೈರಾಗಿ ಇನ್ನೊರ್ವ ಮಾಜಿ ಸಂಸದರಾದ ಶಿವರಾಮಗೌಡರು ಕಾರ್ಯಕ್ರಮಕ್ಕೆ ಆಗಮಿಸಿರುವುದು ಗಮನ ಸೆಳೆಯಿತು.
ಈ ಮೇಲ್ಸೇತುವೆ 34 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದ್ದು ಮೇಲ್ಸೇತುವೆ ಉದ್ದ 675 ಮೀ. ಉದ್ದವಿದೆ.