ಕೊಪ್ಪಳ : ಮೊನ್ನೆ ಹ್ಯಾಟಿ ಮುಂಡರಗಿಯಲ್ಲಿ ಶಾಸಕರಾದ ರಾಘವೇಂದ್ರ ಹಿಟ್ನಾಳ ಭೇಟಿ ವೇಳೆ ನಡೆದ ಗಲಾಟೆ ಪ್ರಕರಣ ಸಂಬಂಧ ಶಾಸಕರ 8 ಬೆಂಬಲಿಗರ ವಿರುದ್ಧ ಜಾತಿ ನಿಂದನೆ ಜೀವ ಬೆದರಿಕೆ ಆರೋಪದಡಿ ರಾತ್ರಿ ಪ್ರತಿದೂರು ದಾಖಲಾಗಿದೆ.
ಅ. 7ರಂದು ಗ್ರಾಮಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ ನೀಡಿದ್ದ ವೇಳೆ ರಸ್ತೆ, ನೀರಾವರಿ ಸೇರಿದಂತೆ ವಿವಿಧ ಸೌಲಭ್ಯಗಳಿಗಾಗಿ ಕೆಲವರು ಮನವಿ ಮಾಡಿಕೊಂಡಿದ್ದರು.
ಈ ವೇಳೆ ಶಾಸಕರು ಸ್ಪಂದಿಸಿಲ್ಲ ಎಂದು ಆರೋಪಿಸಿ ಯುವಕರು ಧಿಕ್ಕಾರ ಕೂಗಿದ್ದರು. ಬಳಿಕ ನಡೆದ ಗಲಾಟೆಗೆ ಸಂಬಂಧಿಸಿದಂತೆ ಬಸವರಾಜ ಹಾಗೂ ಹನುಮೇಶ ಎಂಬುವವರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆಂಬ ಆರೋಪದಡಿ 12 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಪೊಲೀಸರು ಬೆಳಗಿನ ಜಾವ ಕೆಲವರನ್ನು ವಶಕ್ಕೆ ಪಡೆದಿದ್ದರು.
ತಮ್ಮ ಮಕ್ಕಳು ತಪ್ಪು ಮಾಡಿಲ್ಲ, ಅಭಿವೃದ್ಧಿ ಸೌಲಭ್ಯ ಕೇಳಿದ್ದಕ್ಕೆ ಶಾಸಕರ ಬೆಂಬಲಿಗರು ಸುಳ್ಳು ದೂರು ನೀಡಿದ್ದಾರೆ ಎಂದು ಆರೋಪಿಸಿ ನಿನ್ನೆ ಬೆಳಗ್ಗೆಯಿಂದ ಗ್ರಾಮಸ್ಥರು ಗ್ರಾಮೀಣ ಪೊಲೀಸ್ ಠಾಣೆ ಮುಂದೆ ಇಡೀ ದಿನ ಪ್ರತಿಭಟನೆ ನಡೆಸಿದ್ದರು. ಬಿಜೆಪಿ ಮುಖಂಡರು ಡಾ. ಬಸವರಾಜ ಕ್ಯಾವಟರ್ , ಗಣೇಶ ಹೊರತಟ್ನಾಳ ಗ್ರಾಮಸ್ಥರಿಗೆ ಬೆಂಬಲ ನೀಡಿದ್ದರು.
ಇದೀಗ ಶಾಸಕರ ಬೆಂಬಲಿಗ ಮಹೇಶ ಗಣಪ, ಬಸವರಾಜ ಮಂಗಳಾಪುರ, ಗೋಣಿ ಬಸವರಾಜ, ಹನುಮೇಶ, ಹನಮಂತ, ಯಮನೂರಪ್ಪ ಮಾಲಿಪಾಟೀಲ್, ಬಸವರಾಜ ಕಟ್ಟಿಮನಿ, ವಿನಾಯಕ ತಳವಾರ ಎಂಬುವವರ ವಿರುದ್ಧ ಜಾತಿ ನಿಂದನೆ ಆರೋಪದಡಿ ಪ್ರತಿದೂರು ದಾಖಲಾಗಿದೆ.