ಕೊಪ್ಪಳ : ಕಬ್ಬು ಬೆಳೆಗೆ ₹ 5500 ಬೆಂಬಲ ಬೆಲೆ ನಿಗದಿ ಮಾಡಲು ಆಗ್ರಹಿಸಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಸಮಿತಿ ಇಂದು ಜಿಲ್ಲಾಧಿಕಾರಿಗಳ ಮೂಲಕ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿತು.
ಕೇಂದ್ರ ಸರ್ಕಾರ ಟನ್ ಕಬ್ಬಿಗೆ ₹5500 ನಿಗದಿ ಮಾಡಬೇಕು, ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಹರಿಯಾಣ ಪಂಜಾಬ ತಮಿಳುನಾಡು ಮಾದರಿಯಂತೆ ಎಸ್ಎಪಿಯನ್ನು ₹1000 ಕ್ಕೆ ರಾಜ್ಯ ಸರ್ಕಾರ ನಿಗದಿ ಮಾಡಬೇಕು.
ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಹಣ ಪಾವತಿಯಾಗಬೇಕು, ತಪ್ಪಿದಲ್ಲಿ 15% ಬಡ್ಡಿ ಸೇರಿಸಿ ಪಾವತಿಸಬೇಕು. ಕಬ್ಬು ಕಟಾವು ಸಂದರ್ಭ ಲಗಾನಿ ಹೆಸರಿನ ಅವ್ಯವಹಾರ ತಡೆಯಬೇಕು.
ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮುನ್ನ ಡಿಸಿ ಅಧ್ಯಕ್ಷತೆಯಲ್ಲಿ ರೈತರ ಕುಂದು ಕೊರತೆ, ಬೆಲೆ, ಕಟಾವು ಕುರಿತು ಸಭೆ ನಡೆಯಬೇಕು. ಸಕ್ಕರೆ ಇಳುವರಿ ಪ್ರಕಟಣೆ ಮತ್ತು ತೂಕದಲ್ಲಿ ಮೋಸ ತಡೆಯಲು ಪ್ರತಿ ಕಾರ್ಖಾನೆಯಲ್ಲಿ ರೈತರ ಸಮಿತಿ ರಚನೆಯಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾಧ್ಯಕ್ಷರು ಜಿ. ನಾಗರಾಜ, ಕಾರ್ಯದರ್ಶಿ ಶೇಕಪ್ಪ ಕಮತರ, ಈರಯ್ಯ , ಬಸವರಾಜ ರಾವಣಕಿ, ಮೌನೇಶ ಕಮ್ಮಾರ, ರಾಮಣ್ಣ ಬಿನ್ನಾಳ, ಕಾಸಿಂ ಸರದಾರ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.