ಕೊಪ್ಪಳ : KPSC ನೇಮಕಾತಿ ಹಗರಣ ಖಂಡಿಸಿ ಮತ್ತು ಅಕ್ರಮದ ಸಂಪೂರ್ಣ ನಿಷ್ಪಕ್ಷಪಾತ ತನಿಖೆ ನಡೆಸಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಆಗ್ರಹಿಸಿದ SFI ಇಂದು ಈ ಬಗ್ಗೆ ಉಪತಹಶಿಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಅಶೋಕ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ SFI ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಸರ್ಕಾರಿ ಉದ್ಯೋಗಕ್ಕಾಗಿ ವರ್ಷಗಟ್ಟಲೆ ಪರಿಶ್ರಮಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ.
ಇಂಥ KPSC ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮಗಳ ಗಂಭೀರ ಹಗರಣ ರಾಜ್ಯದ ಉದ್ಯೋಗಾಕಾಂಕ್ಷಿಗಳಲ್ಲಿ ತೀವ್ರ ಆತಂಕ ಹುಟ್ಟಿಸಿದೆ.
ಇದು ಕೇವಲ ನೇಮಕಾತಿಯ ಪ್ರಶ್ನೆಯಲ್ಲ ಇದು ಹಿಂದೆ ಬಿಜೆಪಿ ಈಗ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಹುನ್ನಾರ. ಸರ್ಕಾರಿ ಉದ್ಯೋಗ ಹಣ, ಪ್ರಭಾವದ ಮೂಲಕ ದೊರೆಯುವಂತೆ ಆಗಬಾರದು, ವರ್ಷನುಗಟ್ಟಲೆ ಓದಿದ ಬಡ ರೈತ, ಕಾರ್ಮಿಕ, ದಲಿತ, ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ನಾಗರಾಜ್ ಮಾತನಾಡಿ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣದ ತನಿಖೆ ಸಿಐಡಿ ನಡೆಸುತ್ತಿದೆ, ED ಹಣಕಾಸಿನ ಅವ್ಯವಹಾರ ತನಿಖೆ ನಡೆಸುತ್ತಿದೆ. ಓಎಂಆರ್ ತಿದ್ದುಪಡಿ, ಪ್ರಶ್ನೆ ಪತ್ರಿಕೆ ಸೋರಿಕೆಯ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದರು.
ಪ್ರತಿಭಟನೆಯಲ್ಲಿ ಎಐಎಡಬ್ಲ್ಯೂಯು ಸಂಘದ ಮುಖಂಡ ಸುಂಕಪ್ಪ ಗದಗ ವಿದ್ಯಾರ್ಥಿಗಳಾದ ಅಕ್ಷಯ್, ಆಕಾಶ್, ಸೌಮ್ಯ, ನಿರಂಜನ, ಮಂಜುಳಾ, ಅನಿತಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು