ಕೊಪ್ಪಳ : ನಿರ್ಮಿತಿ ಕೇಂದ್ರ ಹತ್ತಿರ ಅಂಜುಮನ್ ಶಾದಿ ಮಹಲ್ ಭೂಮಿ ಪೂಜೆಗೆ ಹೊರಟಿದ್ದ ಸಚಿವರು ಶಾಸಕರು ಸಂಸದರು ಇಂದು ಯುವಕರು ಮಹಿಳೆಯರಿಂದ ಧಿಕ್ಕಾರ ಹಾಗೂ ಪ್ರತಿಭಟನೆ ಎದುರಿಸಬೇಕಾಯಿತು.
ಸಿಂದೋಗಿ, ಮುದ್ದಾಬಳ್ಳಿ , ಬಹದ್ದೂರಬಂಡಿ, ಹೊಸಳ್ಳಿಯ ಎರಡು ಮುಖ್ಯ ರಸ್ತೆಗಳು ಸೇರುವ ಶ್ರೀಶೈಲ ನಗರದ ಮುಖ್ಯ ರಸ್ತೆ ಸಂಪೂರ್ಣ ಹಾಳಾದ ಕಾರಣ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳರ ಕಾರು ಹೊರಟಿದ್ದಾಗ ಧಿಕ್ಕಾರದ ಪ್ರತಿಭಟನೆ ಎದುರಿಸಬೇಕಾಯಿತು.
ಇದಕ್ಕೂ ಮುಂಚೆ ಧ್ವಜಾರೋಹಣ ನೆರವೇರಿಸಿದ್ದ ತಂಗಡಗಿ ಸರಕಾರದ ಸಾಧನೆಗಳ ಭಾಷಣವನ್ನು ಓದಿ ಬಂದಿದ್ದರು. ಇಲ್ಲಿ ಹದಗೆಟ್ಟ ರಸ್ತೆಯಿಂದಾಗಿ ಸಾರ್ವಜನಿಕರ ಪ್ರತಿಭಟನೆ ಎದುರಿಸಿದರು.
ಯುವಕರು ಸಾರ್ವಜನಿಕರು ಜಮಾಯಿಸಿದ್ದ ಶ್ರೀಶೈಲ ನಗರ ರಸ್ತೆಯಲ್ಲಿ ಕಾರು ಹೊರಟಾಗ ಧಿಕ್ಕಾರ ಕೂಗಿದಾಗ ಕಾರಿನಿಂದ ಸಚಿವರು ಶಾಸಕರು ಸಂಸದರು ಇಳಿದು ಬಂದರು.
ಸಚಿವರು ಇದು ನನಗೆ ಸಂಬಂಧಿಸಿದ್ದಲ್ಲ ಎಂಬಂತೆ ಮೌನವಾದರೆ ಇಮ್ರಾನ್ ಪಾಷಾ ಅರಗಂಜಿ, ಶಾರೂಖ್, ಹಬೀಬ್, ಇಸಾಕ್ ಹಾಗೂ ಯುವಕರು ಮಹಿಳೆಯರು ಮಾತನಾಡಿ ರಸ್ತೆ ಸಂಪೂರ್ಣ ತಗ್ಗು ಬಿದ್ದಿದ್ದು ಇದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ಬಹಳ ತೊಂದರೆ ಆಗುತ್ತಿದೆ. ಕೆಟ್ಟ ರಸ್ತೆಯಲ್ಲಿ ವಾಹನ ಸಂಚಾರದಿಂದ ಎದ್ದ ಧೂಳು ರಸ್ತೆ ಪಕ್ಕದ ಮನೆಗಳ ಜನರಿಗೆ ತೊಂದರೆ ಉಂಟುಮಾಡುತ್ತಿದೆ.
ಮಳೆ ಬಂದರೆ ರಸ್ತೆಯ ತಗ್ಗುಗಳಲ್ಲಿ ನೀರು ನಿಂತು ವಾಹನ ಸವಾರರು ಬಿದ್ದಿದ್ಧಾರೆ. ರಸ್ತೆ ಮಾಡಿಸಿ ಅಂತ ಈಗಾಗಲೇ ಅನೇಕ ಬಾರಿ ಶಾಸಕರಿಗೆ ಗಮನಕ್ಕೆ ತಂದರು ರಸ್ತೆ ಮಾಡಿಸಿಲ್ಲ ಎನ್ನುತ್ತಿದ್ದಂತೆ 15 ದಿನದಲ್ಲಿ ರಸ್ತೆ ಮಾಡಿಸ್ತೀನಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಮೌನವಾದರು.
ಆಗ ಮುಂದಕ್ಕೆ ಆಗಮಿಸಿದ ಸಂಸದ ರಾಜಶೇಖರ ಹಿಟ್ನಾಳ ಪ್ರತಿಭಟನಾಕಾರರನ್ನು ಜಬರಿಸುವ ರೀತಿ ಸಮಾಧಾನ ಮಾಡುತ್ತಾ ಆಯ್ತು ಮಾಡೋಣ 15 ದಿನದಲ್ಲಿ ಮಾಡುತ್ತೇವೆ ಎಂದು ಭಾಗ ಸಾಗ ಹಾಕಲು ನೋಡಿದರು.
ಮುಖಂಡ ಸಲೀಂ ಖಾದ್ರಿ ಮಾತನಾಡಿ ಇತ್ತೀಚಿಗೆ ನಗರದಲ್ಲಿ ಪಾರ್ಕ್ ಗಳಿಗೆ ಅನುದಾನ ಹಾಕಿದ್ಧಿರಿ ಮೊದಲು ರಸ್ತೆಗಳಿಗೆ ಅನುದಾನ ಹಾಕಿ ರಸ್ತೆ ಮಾಡಿಸಿ ನಂತರ ಪಾರ್ಕ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಾಗ್ವಾದ ನಂತರ ಸಮಜಾಯಿಷಿಗೆ ಯುವಕರು ಸಮಾಧಾನಗೊಂಡರು.
ಇದಕ್ಕೂ ಮುನ್ನ ಪ್ರತಿಭಟನೆ ನಡೆಯಲಿದೆ ಎಂದು ತಿಳಿದ ಪೊಲೀಸರು ಆಗಮಿಸಿ ಅನುಮತಿ ಇಲ್ಲದೆ ಪ್ರತಿಭಟನೆ ಬೇಡ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳ ಜೊತೆ ಮಾತನಾಡಲು ಅವಕಾಶ ಒದಗಿಸುತ್ತೇವೆ ಎಂದರೂ ನಿರಾಕರಿಸಿದ ಯುವಕರು ಶಾಸಕರು ಸಚಿವರು ಸಂಸದರ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟಿಸಿದರು.