ಕೊಪ್ಪಳ : ಶಾಸಕ ರಾಘವೇಂದ್ರ ಹಿಟ್ನಾಳ್ ಈ ಸಲವಾದರೂ ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರಕಾರದಿಂದ ಪರಿಹಾರ ಕೊಡಿಸಲಿ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ಹಿಟ್ನಾಳ ಮೂರನೇ ಸಲ ಶಾಸಕರಾಗಿದ್ದರೂ ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರಕಾರದ ಗಮನ ಸೆಳೆದಿದ್ದು ಯಾರೂ ಕೇಳಿಲ್ಲ. ಒತ್ತಡ ಹೆಚ್ಚುತ್ತಿದ್ದಂತೆಯೆ ಕಳೆದ ಸಲ ಕಾರ್ಖಾನೆಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ನಾಮಕೆವಾಸ್ತೆ ಪ್ರಸ್ತಾಪಿಸಿ ಅದನ್ನೆ ದೊಡ್ಡ ಸಾಧನೆ ಎಂದು ಬಿಂಬಿಸಿಕೊಂಡರು. ಶಾಸಕರು ಮಾಲಿನ್ಯದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿಲ್ಲ.
ನಾವು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಸಂಪರ್ಕದಲ್ಲಿದ್ದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕ್ರಮಗಳನ್ನು ಜಾರಿಗೊಳಿಸುವಂತೆ ಮಾಡದಿದ್ದರೆ ಕೊಪ್ಪಳದಲ್ಲಿ ಯಾವ ಕ್ರಮವೂ ಆಗುತ್ತಿರಲಿಲ್ಲ.
ಸಮಸ್ತೆಗಳ ಪ್ರಸ್ತಾವನೆ ಹಿಗೂ ಅವುಗಳನ್ನು ಪರಿಹಾರ ಶಾಸಕರ ಜವಾಬ್ದಾರಿ. ಅಧಿಕಾರದಲ್ಲಿರದವರು ಪ್ರಯತ್ನ ಮಾಡಬಹುದಾದರೆ ಅಧಿಕಾರದಲ್ಲಿರುವವರು ಏಕೆ ಪ್ರಯತ್ನಿಸುತ್ತಿಲ್ಲ ? ಎಂದು ಸಿವಿಸಿ ಪ್ರಕಟಣೆೆಯಲ್ಲಿ ಪ್ರಶ್ನಿಸಿದ್ದಾರೆ.
ಯೋಜನೆಗಳಿಗೆ ನೂರಾರು ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಹೇಳುತ್ತಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಆದರೆ ಅಭಿವೃದ್ಧಿ ಕಾಣುತ್ತಿಲ್ಲ. ಹಣ ಎಲ್ಲಿ ಹೋಯಿತು ? ಯೋಜನೆಗಳ ಪ್ರಗತಿ ಏನಾಗಿದೆ? ಕೊಪ್ಪಳ ನಗರ ಸೇರಿದಂತೆ ಕ್ಷೇತ್ರಾದಲ್ಲಿ ಮೂಲಭೂತ ಸೌಕರ್ಯಗಳು ಏಕೆ ಕನಿಷ್ಟ ಮಟ್ಟದಲ್ಲಿವೆ ? ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳೇ ಮಾಯವಾಗಿವೆ.
ಬರದಿಂದ ರೈತರು ಗುಳೆ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವವಾಗುವ ಸಾಧ್ಯತೆಯಿದೆ. ಕ್ಷೇತ್ರದ ನೈರ್ಮಲ್ಯ ಮಟ್ಟ ತೀರಾ ಕೆಳಗಿದೆ. ಕ್ಷೇತ್ರಾದ್ಯಂತ ಮಾದಕ ವಸ್ತುಗಳ ಮಾರಾಟ ಜೋರಾಗುತ್ತಿದೆ. ತಮ್ಮನ್ನು ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಬರಗಾಲದ ಕುರಿತು ಸಭೆಗೆ ಶಾಸಕರು ಗೈರು ಹಾಜರಾದರು.
ತಮ್ಮ ಸಿಟ್ಟನ್ನು ತೋರ್ಪಡಿಸಲು ಅವರು ಅಧಿವೇಶನಕ್ಕೆ ಗೈರು ಹಾಜರಾಗುವುದು ಬೇಡ. ಹೈಕಮಾಂಡ್ ಮೇಲಿನ ಸೇಡನ್ನು ತಮ್ಮನ್ನು ಆಯ್ಕೆ ಮಾಡಿದ ಮತದಾರರ ಮೇಲೆ ತೋರಿಸುವುದು ಬೇಡ ಎಂದು ಸಲಹೆ ನೀಡಿದ್ದಾರೆ.
ಕೈಗಾರಿಕೆಗಳ ಸಮಸ್ಯೆಗಳಿಗೆ ಜನರ ಬೇಡಿಕೆಗಳಿಗೆ ಶಾಸಕರ ನಿಲುವೇನು ? ಕಳೆದ ಅಧಿವೇಶನದಲ್ಲಿ ಶಾಸಕರು ಮಾತನಾಡಿದಾಗಿನಿಂದ ಇಲ್ಲಿಯ ತನಕ ಬೇಡಿಕೆ ಈಡೇರಿಕೆಗಾಗಿ ಕೈಗೊಂಡ ಕ್ರಮಗಳೇನು ಎಂಬುದನ್ನು ಶಾಸಕರು ಜನತೆಗೆ ತಿಳಿಸಬೇಕೆಂದು ಸಿವಿಸಿ ಆಗ್ರಹಿಸಿದ್ದಾರೆ.