ಕೊಪ್ಪಳ : ರಾಜ್ಯದಲ್ಲಿ ಸಂಭವನೀಯ ಬರ ಹಾಗೂ ನೆರೆ ಹಾನಿ ಅಧ್ಯಯನಕ್ಕೆ ಜೆಡಿಎಸ್ ತಂಡ ರಚನೆಯಾಗಿದ್ದು ತಂಡದಲ್ಲಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಸದಸ್ಯರಾಗಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ಸಿವಿಸಿ ನೇಮಕ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕಕ್ಕೆ ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಅಧ್ಯಯನ ತಂಡದ ಅಧ್ಯಕ್ಷರಾಗಿದ್ದು ಈ ಭಾಗಗಳ ಅಧ್ಯಯನ ತಂಡದ ಸದಸ್ಯರಾಗಿ ಸಿ ವಿ ಚಂದ್ರಶೇಖರ್ ಕಾರ್ಯ ನಿರ್ವಹಿಸಲಿದ್ದಾರೆ. ತಂಡದಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ಇದ್ದಾರೆ.
ಕೊಪ್ಪಳವು ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗದ ಬಹುತೇಕ ಜಿಲ್ಲೆಗಳು ತೀವ್ರ ಬರಗಾಲ ಪರಿಸ್ಥಿತಿಯತ್ತ ಹೆಜ್ಜೆ ಇಡುತ್ತಿವೆ.
ಈ ವರ್ಷ ವಾಡಿಕೆಗಿಂತ 40% ಕ್ಕಿಂತ ಕಡಿಮೆ ಮಳೆಯಾಗಿದೆ. ಇದರಿಂದ ಏಕದಳ, ದ್ವಿದಳ ಹಾಗೂ ಇತರೆ ಬೆಳೆಗಳಿಗೆ ತೀವ್ರ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ.
ಈ ಭಾಗಗಳ ಜೆಡಿಎಸ್ ತಂಡದ ಸದಸ್ಯರು ಶೀಘ್ರದಲ್ಲಿಯೇ ಸಭೆ ಸೇರಿ ಪ್ರವಾಸ ಭೇಟಿಯ ವೇಳಾಪಟ್ಟಿ ಅಂತಿಮಗೊಳಿಸಲಿದ್ದಾರೆ ಎಂದು ಜೆಡಿಎಸ್ ಪ್ರಕಟಣೆ ತಿಳಿಸಿದೆ.