ಕೊಪ್ಪಳ : ಕುವೆಂಪು ನಗರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಆರಂಭಿಸಲು ತೋರಿಸಿದ ನಿರ್ಲಕ್ಷ್ಯ ವಿರುದ್ದ ಪಾಲಕರು ಪೋಷಕರು ಇಂದು ಶಾಲೆ ಮುಂದೆ ಪ್ರತಿಭಟನೆ ನಡೆಸಿದರೆ ಹೋರಾಟ ಬೆಂಬಲಿಸಿ ನೂರಾರು ವಿದ್ಯಾರ್ಥಿಗಳು ಶಾಲೆಗೆ ಸಾಮೂಹಿಕವಾಗಿ ಗೈರು ಆದರು.
ಶಾಲೆಯಲ್ಲಿ ಶಿಕ್ಷಕರು ಮಾತ್ರ ಇದ್ದರು. ಆಟ ಪಾಠ ಇಲ್ಲದೆ ತರಗತಿ ಕೋಣೆಗಳು, ಶಾಲೆ ಆವರಣ ಬಿಕೋ ಎನ್ನುತ್ತಿತ್ತು. 8ನೇ ತರಗತಿ ಓದಬೇಕಾದ ಆದರೆ ಅಡ್ಮಿಷನ್ ಇಲ್ಲದೆ ಉಳಿದಿರುವ 14 ವಿದ್ಯಾರ್ಥಿಗಳು ಮಾಧ್ಯಮಗಳೊಂದಿಗೆ ಮಾತನಾಡಲು ಶಾಲಾ ಆವರಣಕ್ಕೆ ಬಂದಿದ್ದರು.
ಕುವೆಂಪು ನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಆರಂಭಿಸಬೇಕು. ಬೇರೆಡೆ 8ನೇ ತರಗತಿಗಾಗಿ ಸರಕಾರಿ ಶಾಲೆಗೆ ಹೋಗಲು ಕನಿಷ್ಠ 4 ಕಿ.ಮೀ ದೂರ ಇದ್ದು ವಿದ್ಯಾರ್ಥಿಗಳು ವಾಹನ ಸಂಚಾರ ಇರುವ ರಸ್ತೆ ಮೂಲಕವೇ ಹೋಗಬೇಕಿದೆ.
ಹೋಗುವ ರಸ್ತೆ ಪಕ್ಕ ನಾಲ್ಕು ಸ್ಮಶಾನವಿದ್ದು ಇದರಿಂದ ದೂರದ ಶಾಲೆಗೆ ಹೋಗಲು ವಿದ್ಯಾರ್ಥಿಗಳು ಭಯ ಪಡುತ್ತಿದ್ದಾರೆ. ಮೇಲಾಗಿ ಕುವೆಂಪು ನಗರ ಹತ್ತಿರ ಹೆದ್ದಾರಿ ಬೈಪಾಸ್ ಇರುವುದರಿಂದ ಅಲ್ಲಿಂದ ಬರುವ ವಾಹನಗಳ ದಟ್ಟಣೆ ಹೆಚ್ಚಿದೆ.
ಕುವೆಂಪು ನಗರದಲ್ಲಿ 500 ಮನೆಗಳಿದ್ದು ಬಹುಪಾಲು ಬಡವರು ದಲಿತರು ಹಿಂದುಳಿದ ಅಲ್ಪಸಂಖ್ಯಾತ ವರ್ಗದ ಜನ ಇದ್ದಾರೆ. ಖಾಸಗಿ ಶಾಲೆಗೆ ಮಕ್ಕಳನ್ನು ಕಳಿಸುವಷ್ಟು ಆರ್ಥಿಕ ಬಲ ಇಲ್ಲದ ಕಾರಣ ಕುವೆಂಪು ನಗರದ ಶಾಲೆಯಲ್ಲಿ 8ನೇ ತರಗತಿ ಆರಂಭಿಸಿ ಎಂದು ನಾಲ್ಕಾರು ತಿಂಗಳಿನಿಂದ ಮುಖಂಡರು ಪ್ರಯತ್ನಿಸಿ ಮನವಿ ಮಾಡಿದ್ದಾರೆ. ಶಾಸಕರನ್ನು ಭೇಟಿಯಾಗಿದ್ಧಾರೆ.
ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕಾದ DDPI ಸೋಮಶೇಖರಗೌಡ ಬೇಕಾಬಿಟ್ಟಿಯಾಗಿ ಪ್ರಸ್ತಾವನೆ ಅಂದರೆ ಚೆಕ್ ಲಿಸ್ಟ್ ಇಲ್ಲದೆ ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸದಕ್ಕೆ ಈ ಪ್ರಸ್ತಾವನೆ ಮಾನ್ಯ ಆಗಿಲ್ಲ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ.
ಇಂದು ಧರಣಿಯಲ್ಲಿ DDPI ವಿರುದ್ದ ಆಕ್ರೋಶ ವ್ಯಕ್ತಪಡಿಸಿದ SDMC ಅಧ್ಯಕ್ಷರು ಮಲ್ಲಿಕಾರ್ಜುನ ಪೂಜಾರ ಕೂಡಲೇ ನಮ್ಮ ಏರಿಯಾದ ಶಾಲೆಗೆ 8ನೇ ತರಗತಿ ಆರಂಭಿಸಬೇಕು ಮತ್ತು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿರುವ DDPI ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಮಲ್ಲಿಕಾರ್ಜುನ ಪೂಜಾರ ಪರಶುರಾಮ ಕೆರಳ್ಳಿ , ಆಸೀಫ್ ಖಾನ್ ಹಣಗಿ ಮಂಜುನಾಥ ಹಂದ್ರಾಳ ಸೇರಿದಂತೆ ಅನೇಕ ಮುಖಂಡರು ಮಹಿಳೆಯರು ಪಾಲಕರು ಪೋಷಕರು ಪಾಲ್ಗೊಂಡಿದ್ದರು.