ಕೊಪ್ಪಳ : ಕನಕಗಿರಿ ಹತ್ತಿರ ಚಿರ್ಚನಗುಡ್ಡ ತಾಂಡಾ ಹತ್ತಿರದ ಗುಡ್ಡದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಶವ ಪ್ರಕರಣ ಪೊಲೀಸರು ಭೇದಿಸಿದ್ದಾರೆ.
ಕನಕಗಿರಿ ಹೊರವಲಯದಲ್ಲಿ ಇತ್ತೀಚಿಗೆ ಮಹಿಳೆಗೆ ಬೆಂಕಿ ಹಚ್ಚಿ ಕೊಂದ ಘಟನೆ ಮಾಸುವ ಮುನ್ನವೆ ಚಿರ್ಚನಗುಡ್ಡದಲ್ಲಿ ಪುರುಷನ ಸುಟ್ಟ ಶವ ಪತ್ತೆಯಾಗಿ ಜನ ಭಯಭೀತರಾಗುವಂತೆ ಮಾಡಿತ್ತು.
ಪೊಲೀಸರು ಕೊಲೆ ಹಾಗೂ ಸಾಕ್ಷ್ಯ ನಾಶ ಯತ್ನ ಪ್ರಕರಣ ದಾಖಲಿಸಿಕೊಂಡು ಕಾಣೆಯಾದವರ ವಿವರ ಪರಿಶೀಲಿಸಿದಾಗ ಪ್ರಕರಣ ಬಯಲಾಗಿದೆ.
ಪ್ರಕರಣ ಭೇದಿಸಿರುವ ಪೊಲೀಸರು ಕೊಲೆಯಾಗಿ ಸುಡಲ್ಪಟ್ಟ ವ್ಯಕ್ತಿ ಕೆಸರಟ್ಟಿಯ ದೇವರಾಜ ಮಾಲಿಪಾಟೀಲ್ (33) ಎಂದು ತಿಳಿದು ಬಂದಿದ್ದು ದೇವರಾಜ ಕೊಲೆ ಆರೋಪದಲ್ಲಿ ಆತನ ಅಣ್ಣ ಕೆಸರಟ್ಟಿಯ ಅಯ್ಯನಗೌಡ ಹಾಗೂ ಅಳಿಯ ಕೊಪ್ಪಳ ತಾಲೂಕಿನ ಬೆಟಗೇರಿಯ ಗಂಗಾಧರ ಮಾಲಿಪಾಟೀಲ್ ಈ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೊಲೆಯಾದ ದೇವರಾಜ ಮದ್ಯವ್ಯಸನಿಯಾಗಿದ್ದು ಆಸ್ತಿ ಸಂಬಂಧ ಜಗಳವಾಡುತ್ತಿದ್ದ. ಜೂನ್ 28 ರಂದು ದೇವರಾಜ , ಅಯ್ಯನಗೌಡ, ಗಂಗಾಧರ ಇವರು ಆಸ್ತಿ ವಿಷಯದ ಜಗಳದಲ್ಲಿ ದೇವರಾಜ ಸಾವನ್ನಪ್ಪಿದ್ದಾನೆ.
ಅಂದು ರಾತ್ರಿ 10 ಗಂಟೆಗೆ ಕೌದಿಯಲ್ಲಿ ದೇವರಾಜ ಶವ ಸುತ್ತಿದ ಅಯ್ಯನಗೌಡ ಮತ್ತು ಗಂಗಾಧರ ಶವವನ್ನು ಬೈಕ್ ನಲ್ಲಿ ಚಿರ್ಚನಗುಡ್ಡಕ್ಕೆ ಒಯ್ದು ಬೈಕ್ ನ ಪೆಟ್ರೋಲ್ ತೆಗೆದು ಅದರಿಂದ ಶವಕ್ಕೆ ಹಾಕಿ ಸುಟ್ಟಿದ್ದಾರೆ.
ಅಲ್ಲಲ್ಲಿ ಅಲ್ಪಸ್ವಲ್ಪ ಮಾಂಸಖಂಡ ಬಿಟ್ಟರೆ ಬಹುಪಾಲು ಸುಟ್ಟು ಹೋಗಿ ಅಸ್ಥಿಪಂಜರ ಸ್ಥಿತಿಯಲ್ಲಿ ಕಂಡು ಬಂದ ಶವದ ಕೊಲೆಗಾರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.