ಕೊಪ್ಪಳ : ಗಂಗಾವತಿಯ ಪ್ರಶಾಂತ ನಗರದಲ್ಲಿ ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕಾಸ್ಪದ ಘಟನೆ ಇಂದು ಬೆಳಕಿಗೆ ಬಂದಿದ್ದು, ಸಾಲದ ಬಾಧೆಯೇ ಈ ದುರಂತಕ್ಕೆ ಕಾರಣ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಮೃತರನ್ನು ಗಂಗಾವತಿಯ ನ್ಯೂ ಕಾಮಾಕ್ಷಿ ಜುವೆಲರ್ಸ್ ಮಾಲೀಕರಾದ ಪ್ರಕಾಶ್ ರಾಯ್ಕರ್, ಅವರ ಪತ್ನಿ ಪ್ರಭಾ ರಾಯ್ಕರ್ ಹಾಗೂ ಪುತ್ರ ಶಶಾಂಕ್ ರಾಯ್ಕರ್ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ತನಿಖೆ ಪ್ರಕಾರ ಸಾಲದ ಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೃತ ಕುಟುಂಬಕ್ಕೆ ಸುಮಾರು ₹3 ರಿಂದ ₹4 ಕೋಟಿ ಸಾಲವಿತ್ತು ಎನ್ನಲಾಗಿದ್ದು, ಮಾನ್ವಿ ಪಟ್ಟಣದ ಬ್ಯಾಂಕ್‌ನಲ್ಲಿ ಜೆ. ನಾಗರಾಜ್ ಅವರ ಸಾಲಕ್ಕೆ ಪ್ರಕಾಶ್ ರಾಯ್ಕರ್ ಶ್ಯೂರಿಟಿ (ಗ್ಯಾರಂಟಿ) ಹಾಕಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇದಲ್ಲದೆ ವೈಯಕ್ತಿಕ ಸಾಲದ ಹೊರೆ ಹಾಗೂ ಸಾಲಗಾರರ ಕಿರುಕುಳದಿಂದ ಕುಟುಂಬ ತೀವ್ರ ಮಾನಸಿಕ ಒತ್ತಡದಲ್ಲಿತ್ತು ಎಂದು ತಿಳಿದುಬಂದಿದೆ.
ಪ್ರಕಾಶ್ ರಾಯ್ಕರ್ ಅವರ ಮನೆಯನ್ನು ಮಾನ್ವಿ ಬ್ಯಾಂಕ್ ಅಧಿಕಾರಿಗಳು ಈಗಾಗಲೇ ಸೀಜ್ ಮಾಡಿದ್ದರು. ಫೆಬ್ರುವರಿ ತಿಂಗಳವರೆಗೆ ಇದೇ ಮನೆಯಲ್ಲಿ ಬಾಡಿಗೆದಾರರಾಗಿ ವಾಸವಿದ್ದ ಕುಟುಂಬ, ನಂತರ ಬೇರೆ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಪುತ್ರ ಶಶಾಂಕ್ ಎರಡು ದಿನಗಳ ಹಿಂದೆ ಗಂಗಾವತಿಗೆ ಬಂದಿದ್ದ ಎನ್ನಲಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಸೀಜ್ ಮಾಡಲಾಗಿದ್ದ ಮನೆಯ ಹಿಂಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ ಮೂವರೂ ಅಲ್ಲಿಯೇ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಗಂಗಾವತಿ ನಗರ ಠಾಣೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವೈದ್ಯಕೀಯ ವರದಿ ಹಾಗೂ ತನಿಖೆ ಪೂರ್ಣಗೊಂಡ ಬಳಿಕವೇ ಸಾವಿಗೆ ನಿಖರ ಕಾರಣ ಅಧಿಕೃತವಾಗಿ ತಿಳಿಯಲಿದೆ.
ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.