ಕೊಪ್ಪಳ : ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳರನ್ನು ಮಂತ್ರಿ ಮಾಡುವಂತೆ ಪಕ್ಷದ ಮೇಲೆ ಒತ್ತಡಕ್ಕಾಗಿ ಶಾಸಕರ ಬೆಂಬಲಿಗರು ಪ್ರತಿಭಟನೆ ನಿರ್ಧಾರಕ್ಕೆ ಬಂದಿದ್ದಾರೆ.
ಸೋಮವಾರ ಬೆಳಗ್ಗೆ 10 ಗಂಟೆಗೆ ಬನ್ನಿಕಟ್ಟಿಯಿಂದ ಅಶೋಕ ಸರ್ಕಲ್ ವರೆಗೆ ಪ್ರತಿಭಟನೆ ನಡೆಯಲಿದೆ.
ಈ ಕುರಿತು ಇಂದು ಶಾಸಕರ ಕಚೇರಿಯಲ್ಲಿ ಬೆಂಬಲಿಗರ ಸಭೆ ನಡೆಯಿತು. ಸಭೆಯಲ್ಲಿ ಎರಡು ವಿಷಯಗಳಿಗೆ ಕೆಲಕಾಲ ಗದ್ದಲ ಗೊಂದಲದ ವಾತಾವರಣ ಉಂಟಾಗಿತ್ತು.
ಅಹಿಂದದವರು...
ಸಭೆಯಲ್ಲಿ ಮುಖಂಡ ಯಮನೂರಪ್ಪ ನಾಯಕ್ ಮಾತನಾಡುತ್ತ ಸೋಮವಾರ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಹಿಂದ ವರ್ಗದವರು ಬರಬೇಕು ಮತ್ತು ಕರೆತರಬೇಕು ಎಂದಾಗ ಸಭೆಯಲ್ಲಿದ್ದ ಕೆಲವರು ತಕರಾರು ತೆಗೆದು ಅಹಿಂದ ಅಲ್ಲದ ನಾವು ಬರಬಾರದೆ ಎಂದು ಪ್ರಶ್ನೆ ಮಾಡತೊಡಗಿದಾಗ ಗದ್ದಲದ ಉಂಟಾಯಿತು.
ಈ ಮಾತಿಗೆ ಪರ ವಿರೋಧ ಮಾತು ನಡೆದಾಗ ಒಂದು ಹಂತದಲ್ಲಿ 'ಹೌದು ನಾವು ಅಹಿಂದಾನೆ' ಎಂದು ಯಮನೂರಪ್ಪ ಗಟ್ಟಿಯಾಗಿ ಸಮರ್ಥಿಸಿಕೊಂಡ ಮೇಲೆ ವಿವಾದ ತಿಳಿಯಾಯಿತು.
ನಂತರ ಅನೇಕ ಮುಖಂಡರು ಪ್ರತಿಭಟನೆಯ ಸ್ವರೂಪದ ಬಗ್ಗೆ ಮಾತನಾಡಿ ಸಲಹೆಗಳನ್ನು ನೀಡಿದರು.
ಲಾಭ ತಗೊಂಡವರು...
ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಯುವ ಮುಖಂಡ ಒಬ್ಬರು ಶಾಸಕರಿಂದ ಕೆಲಸ, ಲಾಭ ತಗೊಂಡವರು ಹೆಚ್ಚು ಜನರನ್ನ ಕರೆ ತರಬೇಕು ಎಂದು ಹೇಳಿದಾಗ ಮತ್ತೊಮ್ಮೆ ಸಭೆಯಲ್ಲಿ ಗದ್ದಲ ಉಂಟಾಯಿತು. ಕೆಲಸ ತೆಗೆದುಕೊಂಡವರು ಲಾಭ ತಗೊಂಡವರು ಎಂಬ ಮಾತು ಅಲ್ಲಿದ್ದ ಕೆಲವರಲ್ಲಿ ಆಕ್ರೋಶ ತಂದಿತು.
ಕೆಲಸ ಕೊಟ್ಟಿಲ್ಲ
ಆಗ ಕೆಲವರು ಮೂರು ವರ್ಷದಲ್ಲಿ ನಮಗೆ ಒಂದೂ ಕೆಲಸ ಕೊಟ್ಟಿಲ್ಲ ಯಾವುದೇ ನಾಮಿನೇಟ್ ಮಾಡಿಲ್ಲ. ಲಾಭ ತಗೊಂಡವರು ಜನರನ್ನು ಕರೆತರುತ್ತಾರೆ ಬಿಡ್ರಿ ಎಂದು ಹೇಳುತ್ತಾ ಕೆಲವರು ಸಭೆಯಿಂದ ಹೊರನಡೆದರು.
ಒಟ್ಟಾರೆ ಇಂದಿನ ಸಭೆಯು ಶಾಸಕರ ಬೆಂಬಲಿಗರಲ್ಲಿ 'ಅಹಿಂದ ಹಾಗೂ ಇತರರು ' 'ಲಾಭ ತಗೊಂಡವರು ಲಾಭ ಪಡೆಯದವರು' ಎಂಬ ಬಿರುಕು ಇದೆಯಾ ಎಂಬ ಪ್ರಶ್ನೆ ಹುಟ್ಟು ಹಾಕಿದ್ದಂತೂ ನಿಜ.
ಅಮ್ಜದ್ ಗೈರು...
ನಿನ್ನೆ ಜಮೀರ್ ಅಹ್ಮದ್ ಖಾನ್ ಗೆ ಮಂತ್ರಿ ಸ್ಥಾನಕ್ಕಾಗಿ ಕೊಪ್ಪಳದಲ್ಲಿ ನಡೆದ ಪ್ರತಿಭಟನೆ ನೇತೃತ್ವ ವಹಿಸಿದ್ದ ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಇಂದು ಶಾಸಕರಿಗೆ ಸಚಿವ ಸ್ಥಾನಕ್ಕಾಗಿ ಕರೆದ ಹೋರಾಟದ ಸಭೆಗೆ ಗೈರು ಹಾಜರಾಗಿದ್ದು ಕೂಡ ಚರ್ಚೆ ಹುಟ್ಟು ಹಾಕಿತು.
ಈ ನಡುವೆ ಅಮ್ಜದ್ ಪಟೇಲ್ 2028 ರಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗುತ್ತಾರೆ ಎಂಬುದು ಸಾರ್ವಜನಿಕರಲ್ಲಿ ಹೆಚ್ಚು ಚರ್ಚೆಯಲ್ಲಿದೆ.