ಕೊಪ್ಪಳ : ತಾಲೂಕಿನ ಹ್ಯಾಟಿ, ಮೆಳ್ಳಿಕೇರಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಶನಿವಾರ ಸುರಿದ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಭಾರೀ ಗಾಳಿಯ ಅಬ್ಬರಕ್ಕೆ ಬೃಹತ್ ಮರಗಳು ಧರೆಗುರುಳಿದರೆ, ಹಲವೆಡೆ ಬಾಳೆ ತೋಟಗಳು ಸಂಪೂರ್ಣ ನೆಲಸಮವಾಗಿವೆ.
ಮೆಳ್ಳಿಕೇರಿ ಗ್ರಾಮದ ಯಂಕರೆಡ್ಡಿ ಡಂಬ್ರಳ್ಳಿ ಅವರಿಗೆ ಸೇರಿದ ಎರಡು ಎಕರೆ ಬಾಳೆ ತೋಟ ಸಂಪೂರ್ಣ ಹಾನಿಗೊಳಗಾಗಿದೆ. ಇದಲ್ಲದೆ ವಿವಿಧ ಗ್ರಾಮಗಳ ರೈತರಿಗೆ ಸೇರಿದ ಸುಮಾರು 50 ಎಕರೆಗೂ ಹೆಚ್ಚು ಬಾಳೆ ಬೆಳೆ ನಾಶವಾಗಿದೆ ಎಂದು ತಿಳಿದುಬಂದಿದೆ.
ಸುಮಾರು 8 ರಿಂದ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಳೆದಿದ್ದ ಬಾಳೆ ಬೆಳೆ ಫಸಲು ಬಿಡುವ ಹಂತದಲ್ಲಿದ್ದಾಗಲೇ ಬಿರುಗಾಳಿ ಮಳೆಗೆ ಬಾಳೆ ಗಿಡಗಳು ಧರೆಗುರುಳಿದ್ದು, ರೈತ ಕುಟುಂಬಗಳು ಕಣ್ಣೀರಿಡುವಂತಾಗಿದೆ.
ತಕ್ಷಣ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಜೊತೆಗೆ ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕುಣಿಕೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಅಧ್ಯಕ್ಷ ಶಿವಕುಮಾರ ಏಣಿಗಿ ಆಗ್ರಹಿಸಿದ್ದಾರೆ.