ಕೊಪ್ಪಳ : ಕಳೆದ ಮೂರ್ನಾಲ್ಕು ವರ್ಷಗಳಿಂದ ಇಲ್ಲಿನ ಮಾವು ಮೇಳದಲ್ಲಿ ಪ್ರದರ್ಶನಕ್ಕೆ ಇದ್ದ ಜಗತ್ತಿನ ದುಬಾರಿ ಮಾವಿನ ಹಣ್ಣು ಮಿಯಾ ಜಾಕಿ ಈಗ ಅದೇ ಮೇಳದಲ್ಲಿ ಮಾರಾಟಕ್ಕೆ ಇದೆ.
ಕೊಪ್ಪಳದ ಮಾವಿನ ಮೇಳದಲ್ಲಿ ನಟ್ಟ ನಡುವೆ ಗಾಜಿನ ಭದ್ರತೆಯಲ್ಲಿ ಇರುತ್ತಿದ್ದ ಒಂದೇ ಒಂದು ಮಿಯಾ ಜಾಕಿ ಮಾವಿನ ಹಣ್ಣು ಎಲ್ಲರ ಗಮನ ತನ್ನತ್ತ ಸೆಳೆಯುತ್ತಿತ್ತು.
ಮೇಳಕ್ಕೆ ಬಂದವರೆಲ್ಲ ಅದರ ಬಗ್ಗೆಯೆ ಮಾತನಾಡುತ್ತಿದ್ದರು. ಅದರ ಬೆಲೆ ಕೆಜಿಗೆ ಎರಡೂವರೆ ಲಕ್ಷ ಎಂದು ಗೊತ್ತಾಗಿ ಸುಮ್ಮನಾಗುತ್ತಿದ್ದರು.
ಅಂದಿನ ಎರಡೂವರೆ ಲಕ್ಷದ ಮಿಯಾ ಜಾಕಿ ಹಣ್ಣು ಈಗ ಎರಡೂವರೆ ಸಾವಿರ ರೂಪಾಯಿಗೆ ದೊರಕುತ್ತೆ. ಏಕೆಂದರೆ ತಾಲೂಕಿನ ಕಲ್ಲತಾವರಗೆರೆಯಲ್ಲಿ ರೈತರೊಬ್ಬರು ಈ ಮಿಯಾ ಜಾಕಿ ಮಾವು ಬೆಳೆಸಿದ್ದಾರೆ.
ಎಲ್ಲಿಯ ಜಪಾನು ಎಲ್ಲಿಯ ಕಲ್ಲತಾವರಗೆರೆ ? ಮಿಯಾ ಜಾಕಿ ಜಗತ್ತಿನಲ್ಲಿ ಅತ್ಯಂತ ವಿಶೇಷ ತಳಿಯ ಹಣ್ಣು. ಸ್ವಾದಿಷ್ಟ ರುಚಿ ಮತ್ತು ಹೆಚ್ಚು ಪೋಷಕಾಂಶಗಳು ಹಾಗೂ ಅದು ಬೆಳೆಯುವ ಪದ್ದತಿಯ ಖರ್ಚಿನ ಕಾರಣಕ್ಕೆ ದುಬಾರಿ ಎನ್ನಲಾಗುತ್ತಿತ್ತು.
ದೇಶದ ಕೆಲವೇ ಸ್ಥಳದಲ್ಲಿ ಬೆಳೆಯುತ್ತಿದ್ದ ಈ ಮಿಯಾ ಜಾಕಿ ಕೃಷಿಯನ್ನು ಗಿಣಿಗೇರಿ ಮೂಲದ ಕೃಷಿಕ ನಾಗರಾಜ ಬಗನಾಳ ಎರಡು ಎಕರೆಯಲ್ಲಿ ಮಿಯಾ ಜಾಕಿ ಬೆಳೆದಿದ್ದಾರೆ. ಅದರ ಮೊದಲ ಫಸಲು ಈಗ ಬಂದಿದೆ. ಹಾಗಂತ ಭರಪೂರ ಫಸಲು ಬಂದಿಲ್ಲ.
ತಿನ್ನಲು ಸೂಕ್ತವಾದ ಮಾಗಿದ ಮಾವು ಫಸಲು ಬಂದಿರುವುದು 25 ಕೆಜಿ ಮಾತ್ರ. ಅಷ್ಡೂ ಹಣ್ಣನ್ನು ತೋಟಗಾರಿಕೆ ಇಲಾಖೆ ರೈತನಿಂದ ನೇರವಾಗಿ ಖರೀದಿಸಿದೆ. ಹಾಗಾಗಿ ಈ ವರ್ಷ ಮಿಯಾ ಜಾಕಿ ಖರೀದಿಗೆ ಸಿಗುವುದು ಕಷ್ಟಸಾಧ್ಯ.
ಧೈರ್ಯದಿಂದ ಜಗತ್ತಿನ ದುಬಾರಿ ಮಾವಿನ ಕೃಷಿ ಮಾಡಿರುವ ನಾಗರಾಜ ಅವರಿಗೆ ಮಿಯಾ ಜಾಕಿ ಮಾರಾಟ ಆಗುವಂತೆ ಗ್ರಾಹಕರ ಮಾರುಕಟ್ಟೆ ಸೃಷ್ಟಿಸುವ ಸಧ್ಯ ಸಹಾಯಕ ಜವಾಬ್ದಾರಿ ತೋಟಗಾರಿಕೆ ಇಲಾಖೆ ಮೇಲಿದೆ.
[ ಮಾವು ಮೇಳದ ಸ್ಥಳ : ತೋಟಗಾರಿಕೆ ಇಲಾಖೆ ಆವರಣ LIC ಕಚೇರಿ ಎದುರು ಬಸ್ ಸ್ಟಾಂಡ್ ಹತ್ತಿರ ಕೊಪ್ಪಳ ]