ಕೊಪ್ಪಳ : ಅಂಜನಾದ್ರಿಯ ಆಂಜನೇಯಸ್ವಾಮಿಗೆ ಅರ್ಪಿಸಿದ ಕೋಟ್ಯಾಂತರ ಬೆಲೆಯ ಚಿನ್ಜದ ಆಭರಣದಲ್ಲಿ ತಾಮ್ರ ಪತ್ತೆಯಾಗಿದೆ. ದೇಶದ ಟಾಪ್ 3 ಕಂಪನಿಯಾದ AMR ಮಾಲೀಕ ಮಹೇಶ್ ರಡ್ಡಿ ಹೀಗೆಕೆ ಮಾಡಿದರು ? ಎಂಬ ಪ್ರಶ್ನೆ ಉದ್ಭವಿಸಿದೆ.
ಮೇ 8 ರಂದು ಬೆಳಗಿನ ಜಾವ ನೆಲ್ಲೂರು ಮೂಲದ ಉದ್ಯಮಿ ಮಹೇಶ ರಡ್ಡಿ 2. 30 ಕೋಟಿ ಬೆಲೆಯ ಬಂಗಾರದ ಪ್ರಭಾವಳಿ, ಗದೆ, ಕಿರೀಟ ಸೇರಿ ವಿವಿಧ ಆಭರಣಗಳನ್ನು ಆಂಜನೇಯಸ್ವಾಮಿಗೆ ಅರ್ಪಿಸಿದ್ದರು. ಈ ಸಂದರ್ಭ ಗಂಗಾವತಿ ಶಾಸಕ ಜನಾರ್ದನ ರಡ್ಡಿ ಕೂಡ ಜೊತೆಗಿದ್ದರು.
ಆದರೆ ನಿನ್ನೆ ಮೇ 10 ರಂದು ಅಂಜನಾದ್ರಿಯ ಆಡಳಿತಾಧಿಕಾರಿ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಈ ಬಂಗಾರದ ಆಭರಣಗಳ ಮೌಲ್ಯಮಾಪನ ಮಾಡಿಸಿದಾಗ ಆಭರಣಗಳಲ್ಲಿ ತಾಮ್ರವೂ ಇರುವ ಅಂಶ ಪತ್ತೆಯಾಗಿದೆ. ಅಷ್ಟೇ ಅಲ್ಲ 29 ಗ್ರಾಂನಷ್ಟು ಬಂಗಾರ ಇದೆ ಎಂಬ ಮಾಹಿತಿ ತಿಳಿದು ಬಂದಿದೆ.
ಲೋಹ ತಜ್ಞರು ಹಾಗೂ ಬ್ಯಾಂಕ್ ಗಳಲ್ಲಿ ಬಂಗಾರದ ಸಾಲಕ್ಕೆ ಆಭರಣ ಮೌಲ್ಯಮಾಪನ ಮಾಡುವವರು ಉದ್ಯಮಿ ಮಹೇಶ ರಡ್ಡಿ ನೀಡಿದ ಆಭರಣಗಳ ಮೌಲ್ಯಮಾಪನ ಮಾಡಿದಾಗ ಇದು ಗೊತ್ತಾಗಿದೆ.
ತಾಮ್ರಕ್ಕೆ ಚಿನ್ನದ ಲೇಪನ ಮಾಡಲಾಗಿದೆ. ಎಲ್ಲವೂ ಚಿನ್ನ ಅಲ್ಲ ಎಂದು ಆಡಳಿತಾಧಿಕಾರಿ ಮಹೇಶ ಮಾಲಗಿತ್ತಿ ಹೇಳಿದ್ದಾರೆ.
ದೇವಾಲಯಗಳಿಗೆ ದಾನ, ಕಾಣಿಕೆಯಾಗಿ ಬಂದ ಚಿನ್ನ ಬೆಳ್ಳಿ ಆಭರಣಗಳ ಮೌಲ್ಯಮಾಪನ ಮಾಡಿ ದಾಖಲೆ ಇಡಬೇಕಾಗುತ್ತೆ. ಈ ನಿಟ್ಟಿನಲ್ಲಿ ಮೌಲ್ಯಮಾಪನ ಮಾಡಿದಾಗ ಈ ವಿಷಯ ಗೊತ್ತಾಗಿದೆ.
ಆದರೆ ದೇವಸ್ಥಾನಕ್ಕೆ ಬಂಗಾರದ ಕಾಣಿಕೆಗಳನ್ನು ಸ್ವೀಕರಿಸುವ ಮುಂಚೆಯೆ ಅವುಗಳನ್ನು ಪರಿಶೀಲಿಸಿ ಮೌಲ್ಯಮಾಪನ ಮಾಡಬೇಕಾಗಿತ್ತು ಎಂಬ ಮಾತು ಕೇಳ ಬಂದಿದೆ.
ಜಿಲ್ಲಾಡಳಿತ ಅಥವಾ ಅಂಜನಾದ್ರಿ ಆಡಳಿತಾಧಿಕಾರಿ ಈ ಚಿನ್ನ ಲೇಪಿತ ತಾಮ್ರವನ್ನು ದಾನಿಗೆ ವಾಪಸ್ ಕೊಡುತ್ತಾರೊ ಅಥವಾ ಸ್ವೀಕರಿಸಿ ಖಜಾನೆಯಲ್ಲಿ ಇಡುತ್ತಾರೊ ? ಕಾದು ನೋಡಬೇಕು.