ಕೊಪ್ಪಳ : ನಗರ ಹತ್ತಿರ ಬಲ್ದೋಟಾ ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗುತ್ತಾ ? ಅಥವಾ ಸರಕಾರ ಕಾರ್ಖಾನೆ ಅನುಮತಿ ರದ್ದು ಮಾಡುತ್ತಾ ? ಎಂಬ ಚರ್ಚೆಗಳು ನಡೆದಿವೆ.
ಕಾರ್ಖಾನೆ ಬೇಡ ಎಂದು ಕೊಪ್ಪಳದಲ್ಲಿ ಅನಿರ್ದಿಷ್ಟ ಧರಣಿ 126 ದಿನಕ್ಕೆ ತಲುಪಿದೆ. ಈ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಹೋರಾಟದ 126 ನೇ ದಿನಕ್ಕೆ ಮಾಲಿನ್ಯದಿಂದ ಬಳಲಿರುವ ಗ್ರಾಮಗಳಿಗೆ ಹೋಗಿದ್ಧಾರೆ. ಅದೂ ರೈತರ ತೀವ್ರ ಆಕ್ರೋಶ ಎದುರಾದ ಮೇಲೆ.
ಕಾರ್ಖಾನೆ ವಿಷಯದಲ್ಲಿ ಒಂದೆಡೆ ಜನಪ್ರತಿನಿಧಿಯ ಮೌನ ಇನ್ನೊಂದೆಡೆ ಜನಸಾಮಾನ್ಯರ ಹೋರಾಟ. ಹಾಗಾಗಿ ಕಾರ್ಖಾನೆ ಹಿಂದಕ್ಕೆ ಕಳಿಸುವುದು ಸಾಧ್ಯವೆ ? ಎಂಬ ಬಗ್ಗೆ ಭರಪೂರ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುತ್ತಿತ್ತು.
ಆದರೆ ಹೋರಾಟಕ್ಕೆ ಸರಕಾರಕ್ಕೆ ಮಣಿದಿದೆ, ಬಸಾಪುರ ಕೆರೆ ಜನ ಜಾನುವಾರುಗಳಿಗೆ ಮುಕ್ತಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂಬ ಕ್ಲೂ ಮಾಜಿ ಸಂಸದ ಸಂಗಣ್ಣ ಕರಡಿಯವರು ಇತ್ತೀಚೆಗೆ ಧರಣಿ ಸ್ಥಳಕ್ಕೆ ಭೇಟಿ ನೀಡಿದಾಗ ಹೇಳಿದ್ದರು.
ಅಷ್ಟೇ ಅಲ್ಲ ಜಿಲ್ಲೆಯ ಜನಪ್ರತಿನಿಧಿಗಳು ಹಾಲಿ ಮಾಜಿ ಸೇರಿ ಮತ್ತೊಮ್ಮೆ ಮುಖ್ಯಮಂತ್ರಿಗಳ ಬಳಿ ನಿಯೋಗ ಒಯ್ಯಲು ಪ್ರಯತ್ನಿಸಲಾಗುವುದು ಎಂದು ಸಂಗಣ್ಣ ಕರಡಿ ಹೇಳಿದ್ದರು.
ಬಸಾಪುರ ಹತ್ತಿರ ಹೈವೆ ಪಕ್ಕ ಇರುವ ಬಲ್ದೋಟಾ ಕಾರ್ಖಾನೆಯ ದೊಡ್ಡ ಗೇಟ್ ಗೆ ಅಡ್ಡಲಾಗಿ ಕಂಪೌಂಡ್ ಥರದ ಸ್ಲಾಬ್ ನಿಲ್ಲಿಸಿದ್ದು ಇಂದು ಕಂಡು ಬಂತು. ಅಂದರೆ ಆ ದಾರಿ ಆ ಗೇಟ್ ಸದ್ಯಕ್ಕೆ ಬಂದ್.
ಈ ಗೇಟ್ ನಿಂದ ಅರ್ದ ಕಿ.ಮೀ ದೂರದಲ್ಲಿ ಬಲ್ದೋಟಾ ತನ್ನದೆ ಕಂಪೌಂಡ್ ಒಡೆದು ಅಲ್ಲಿ ವಾಹನಗಳ ಓಡಾಟಕ್ಕೆ ಸ್ಥಳ ಬಿಟ್ಟಿರುವ ದೃಶ್ಯ ಕಂಡು ಬಂದಿದೆ. ಎರಡು ಕಡೆಯ ಈ ದೃಶ್ಯ ಅಚ್ಚರಿಗೂ ಕಾರಣವಾಗಿದೆ. ಹಾಗಾದ್ರೆ ಕೆರೆ ಜನ ಜಾನುವಾರುಗಳಿಗೆ ಮುಕ್ತ ಆಗುತ್ತಾ ? ಈ ಗೇಟ್ ಬದಲಾವಣೆ ಅದಕ್ಕೆ ಮುನ್ನುಡಿಯಾ ? ಹಾಗಾದ್ರೆ ಮುಂದೆ ಕಾರ್ಖಾನೆಯೂ ಎತ್ತಂಗಡಿ ಆಗುತ್ತಾ ?
ಮತ್ತೆ ಪ್ರಶ್ನೆಗಳು ಕಾಡುತ್ತವೆ. ಇದರ ಬಗ್ಗೆ ಒಂದೆರೆಡು ದಿನದಲ್ಲಿ ಸ್ಪಷ್ಟ ಚಿತ್ರಣ ಕಂಡು ಬರಲಿದೆ.
ರಾಜ್ಯ ಬಜೆಟ್ ಸಂದರ್ಭದಲ್ಲಿ ಕೊಪ್ಪಳದ ಹೋರಾಟವನ್ನು ಬೆಂಗಳೂರಿನ ಫ್ರೀಡಂ ಪಾರ್ಕಿಗೆ ಒಯ್ಯುವ ಯೋಚನೆಯಲ್ಲಿ ಹೋರಾಟಗಾರರು ಇದ್ದು ಅದಕ್ಕಾಗಿ ಮಾರ್ಚ್ 7 ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ಕರೆದಿದ್ದಾರೆ.