ಕೊಪ್ಪಳ: ಕಾರ್ಖಾನೆಗಳ ಮಾಲಿನ್ಯದಿಂದ ಜನಜೀವನ ತತ್ತರಿಸಿರುವ ಕೆಲವು ಹಳ್ಳಿಗಳ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೆ. 24 ರಂದು ನಡೆದ ಕೊಪ್ಪಳ ಭಾಗ್ಯನಗರ ಬಂದ್ ವೇಳೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಬಳಿಕ ಶಾಸಕ ರಾಘವೇಂದ್ರ ಹಿಟ್ನಾಳ ಎಚ್ಚೆತ್ತುಕೊಂಡು ಇಂದು ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ವಿಶೇಷವೆಂದರೆ ಅವರ ಜೊತೆ ಜಿಲ್ಲಾಧಿಕಾರಿಯವರೂ ಭೇಟಿ ನೀಡಿದರು.
ಈ ವೇಳೆ ಗ್ರಾಮಸ್ಥರು ಕಾರ್ಖಾನೆಗಳಿಂದ ಹೊರಬರುವ ಧೂಳಿನಿಂದ ಬದುಕು ಸಂಕಷ್ಟಕ್ಕೀಡಾಗಿದೆ ಎಂದು ದೂರಿದರು. ದಿನವೂ ಉಸಿರಾಟದ ತೊಂದರೆ ಹಾಗೂ ಅನಾರೋಗ್ಯದಿಂದ ನರಳುತ್ತಿದ್ದು, “ನಾವು ದಿನಾ ಸತ್ತು ಹುಟ್ಟಿ ಬದುಕುತ್ತಿದ್ದೇವೆ. ಹೀಗೆ ದಿನವೂ ಸಾಯುವುದಕ್ಕಿಂತ ಒಮ್ಮೆ ದಯಾಮರಣ ನೀಡಿಬಿಡಿ” ಎಂದು ಮಹಿಳೆ ಪಾರಮ್ಮ ಶಾಸಕ ಹಾಗೂ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡರು.
ಇದು ಕಾರ್ಖಾನೆಗಳ ಮಾಲಿನ್ಯದಿಂದ ಗ್ರಾಮಸ್ಥರು ಎದುರಿಸುತ್ತಿರುವ ಸಂಕಷ್ಟದ ಕರಾಳ ಸ್ಥಿತಿಗೆ ಸಾಕ್ಷಿಯಂತಿತ್ತು.
ಗ್ರಾಮಸ್ಥರ ಪ್ರಕಾರ, ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸುತ್ತಿದ್ದು, ಕೆಲವರಿಗೆ ಪಾರ್ಶ್ವವಾಯು ಸಮಸ್ಯೆಯೂ ಕಾಡುತ್ತಿದೆ. ಹೊಲಗಳು ಹಾಳಾಗಿ ಬೆಳೆ ಬರುವುದಿಲ್ಲ. ಕೃಷಿಯನ್ನು ನಂಬಿದ್ದ ಬದುಕು ಸಂಪೂರ್ಣ ಸಂಕಷ್ಟಕ್ಕೀಡಾಗಿದೆ. ಜಾನುವಾರುಗಳಿಗೂ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ.
“ನಾವು ದಿನವೂ ಆಸ್ಪತ್ರೆಗೆ ಹೋಗಿ ಬರುವುದೇ ಕೆಲಸವಾಗಿದೆ. ದಯವಿಟ್ಟು ನಮ್ಮ ಸಂಕಷ್ಟಕ್ಕೆ ಪರಿಹಾರ ನೀಡಿ, ಇಲ್ಲವಾದರೆ ದಯಾಮರಣ ನೀಡಿಬಿಡಿ” ಎಂದು ಗ್ರಾಮಸ್ಥರು ಅಳಲ ವ್ಯಕ್ತಪಡಿಸಿದರು.