ಕೊಪ್ಪಳ: ಇಸ್ರೇಲ್–ಇರಾನ್ ನಡುವಿನ ಯುದ್ಧ ಪರಿಸ್ಥಿತಿ ಪರಿಣಾಮವಾಗಿ ವಿಮಾನಯಾನದಲ್ಲಿ ವ್ಯತ್ಯಯ ಉಂಟಾಗಿದ್ದು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಬಸವರಾಜ ರಾಯರಡ್ಡಿ ಅವರ ಪುತ್ರಿ ಮಮತಾ ರಾಯರಡ್ಡಿ ದುಬೈನಲ್ಲಿ ಸಿಲುಕಿದ್ದಾರೆ.
ನಾಲ್ಕು ದಿನಗಳ ಹಿಂದೆ ಸ್ನೇಹಿತೆಯ ಮದುವೆ ಕಾರ್ಯಕ್ರಮಕ್ಕೆ ದುಬೈಗೆ ತೆರಳಿದ್ದ ಮಮತಾ, ವಾಪಸ್ಸು ಬರಲು ಪ್ರಯತ್ನಿಸಿದರೂ ವಿಮಾನ ಸಿಗದೇ ಅಲ್ಲಿಯೇ ಉಳಿಯಬೇಕಾಗಿದೆ. ಪ್ರಸ್ತುತ ಅವರು ಸ್ನೇಹಿತೆಯ ಮನೆಯಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ವಾಹಿನಿಯೊಂದಿಗೆ ಮಾತನಾಡಿದ ಬಸವರಾಜ ರಾಯರಡ್ಡಿ ಅವರು, “ಮಮತಾ ದುಬೈನಲ್ಲಿ ಸ್ನೇಹಿತರ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ. ದುಬೈನಿಂದ ವಿಮಾನಯಾನ ಸೇವೆ ಪುನಃ ಆರಂಭವಾದ ಕೂಡಲೇ ಅವರನ್ನು ಕರೆತರಲಾಗುವುದು” ಎಂದು ಮಾಹಿತಿ ನೀಡಿದ್ದಾರೆ.
ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನತೆಯಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವುದು ಸಾವಿರಾರು ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.