ಕೊಪ್ಪಳ : ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಸರ್ಕಾರಿ ಶಾಲಾ ಶಿಕ್ಷಕನಿಗೆ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಅವರು ಜೀವಾವಧಿ ಶಿಕ್ಷೆ ಹಾಗೂ 6 ಲಕ್ಷ ರೂ. ದಂಡ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಮಹಮ್ಮದ್ ಅಜರುದ್ದೀನ್ ಎಂಬ ಶಿಕ್ಷಕನೇ ಶಿಕ್ಷೆಗೆ ಒಳಪಟ್ಟಿರುವುದು.
2022ರ ಜೂನ್ 30 ರಂದು ಕಾರಟಗಿಯ ಜೆಪಿ ನಗರದಲ್ಲಿ ತಾನಿದ್ದ ಬಾಡಿಗೆ ಮನೆಯಲ್ಲಿ ಈತನು ಮಹಿಳೆ ಮೇಲೆ ಅತ್ಯಾಚಾರ ಎಸೆಗಿದ್ದ.
ಧಾರವಾಡ ಮೂಲದ ಇತ ಸಿಂಧನೂರು ಹತ್ತಿರದ ಸಿಂಗಾಪುರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದು ಕಾರಟಗಿಯಲ್ಲಿ ವಾಸವಾಗಿದ್ದ.
2022 ಜುಲೈ 2 ರಂದು ಪ್ರಕರಣ ದಾಖಲಾಗಿತ್ತು. ನಿನ್ನೆ ಶುಕ್ರವಾರ ಮಧ್ಯಾಹ್ನ ನ್ಯಾಯಾಧೀಶರಾದ ಸದಾನಂದ ನಾಯ್ಕ ಅವರು ತೀರ್ಪನ್ನು ಓದಿ ಶಿಕ್ಷೆ ಪ್ರಕಟಿಸಿದ್ದಾರೆ.
ದಂಡದ ಹಣದಲ್ಲಿ ಐದೂವರೆ ಲಕ್ಷ ರೂಪಾಯಿ ಸಂತ್ರಸ್ತರಿಗೆ ಹಾಗೂ 50 ಸಾವಿರ ರಾಜ್ಯ ಸರ್ಕಾರಕ್ಕೆ ಪಾವತಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಕಳೆದ ವರ್ಷ ಸಾಣಾಪುರ ಹತ್ತಿರ ನಡೆದ ಇಸ್ರೇಲ್ ಮಹಿಳಾ ಪ್ರಜೆ ಸೇರಿ ಇಬ್ಬರು ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಓರ್ವನ ಕೊಲೆ ಪ್ರಕರಣ ಸಂಬಂಧ ಇತ್ತೀಚಿಗೆ ಮೂವರು ಅಪರಾಧಿಗಳಿಗೆ ಮರಣದಂಡನೆಯನ್ನು ವಿಧಿಸಿದ್ದ ನ್ಯಾಯಾಧೀಶರು ನಿನ್ನೆ ಅತ್ಯಾಚಾರ ಪ್ರಕರಣದ ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ.