ಕೊಪ್ಪಳ : ಬಾಗಲಕೋಟೆ ಜಿಲ್ಲೆ ಮುಧೋಳದ ಖಾಡೆ ಸಾಹಿತ್ಯ ಪ್ರತಿಷ್ಠಾನ ವತಿಯಿಂದ ಸಾಹಿತಿ ದಿ. ಜಿ. ಬಿ. ಖಾಡೆ ಸ್ಮರಣಾರ್ಥ ನೀಡಲಾಗುವ ‘ಜಿಬಿ ಖಾಡೆ ಜಾನಪದ ಸಾಧಕ ಪ್ರಶಸ್ತಿ’ ಗೆ ಕೊಪ್ಪಳ ಜಿಲ್ಲೆಯ ಶಿಕ್ಷಕ, ಅಂತರಾಷ್ಟ್ರೀಯ ಜಾನಪದ ಗಾಯಕ ಹಾಗೂ ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ ವಾಲಿಕಾರ್ ಆಯ್ಕೆಯಾಗಿದ್ದಾರೆ.
ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದವರಾದ ಡಾ. ಜೀವನಸಾಬ ವಾಲಿಕಾರ್ ಸದ್ಯ ಕುಷ್ಟಗಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಜಾನಪದ ಗಾಯಕರಾಗಿ ಪ್ರಸಿದ್ಧರಾಗಿದ್ದು, ಯುವಜನರಲ್ಲಿ ಜನಪದ ಕಲೆ-ಸಾಹಿತ್ಯದ ಬಗ್ಗೆ ಅಭಿಮಾನ ಮೂಡಿಸುತ್ತಿದ್ದಾರೆ. ಓಮನ್‌ನ ಸಲಾಲ ಮತ್ತು ಮಸ್ಕತ್, ಖತಾರ್‌ನ ದೋಹಾ ಸೇರಿದಂತೆ ವಿದೇಶಗಳಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಜಾನಪದ ಜಾತ್ರೆಗಳಲ್ಲಿ ಭಾಗವಹಿಸಿ ಕನ್ನಡ ಜಾನಪದ ಪರಂಪರೆಯನ್ನು ಪಸರಿಸಿದ್ದಾರೆ.
‘ಜನಪದ ಸಾಹಿತ್ಯದಲ್ಲಿ ಹಾಸ್ಯದ ನೆಲೆಗಳು’ ವಿಷಯದಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿರುವ ಅವರು, ಇತ್ತೀಚೆಗೆ ‘ಜಾನಪದ ಮತ್ತು ಸಮಷ್ಟಿ ಪ್ರಜ್ಞೆ’ ಕೃತಿ ರಚಿಸಿದ್ದಾರೆ. ಈ ಎಲ್ಲ ಸಾಧನೆಯ ಹಿನ್ನೆಲೆಯಲ್ಲಿ 2026ರ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ ಮಾರ್ಚ್ 1 ರಂದು ಮುಧೋಳದಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಅಶೋಕ್ ಜಿ. ಖಾಡೆ ತಿಳಿಸಿದ್ದಾರೆ.