ಕೊಪ್ಪಳ: ಕೊಪ್ಪಳ ತಾಲೂಕಿನ ಅಗಳಕೇರ ಬಳಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಸ್ಥಳೀಯರಲ್ಲಿ ಭಯದ ವಾತಾವರಣ ಉಂಟಾಗಿದೆ. ಗಂಗಾವತಿ–ಹಿಟ್ನಾಳ ರಸ್ತೆ ಮಾರ್ಗದಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು, ರಸ್ತೆ ಮೂಲಕ ಸಂಚರಿಸುತ್ತಿದ್ದ ಸಾರ್ವಜನಿಕರು ಆತಂಕಗೊಂಡರು.
ಸುಮಾರು 12 ಅಡಿ ಉದ್ದ ಹಾಗೂ ಸುಮಾರು 30 ಕೆಜಿ ತೂಕ ಹೊಂದಿದ್ದ ಈ ಹೆಬ್ಬಾವು ಕಂಡು ಜನರು ತಕ್ಷಣ ಅರಣ್ಯ ಇಲಾಖೆ ಹಾಗೂ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಉರಗ ತಜ್ಞ ಅನಿಲ ಪಂಪಣ್ಣ ಅವರು ಸ್ಥಳಕ್ಕೆ ಆಗಮಿಸಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರ ಸಹಕಾರದಿಂದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದರು.
ನಂತರ ಹೆಬ್ಬಾವನ್ನು ಯಾವುದೇ ಅಪಾಯವಾಗದಂತೆ ಅರಣ್ಯ ಪ್ರದೇಶದ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ. ಬೃಹತ್ ಗಾತ್ರದ ಹೆಬ್ಬಾವು ಕಂಡು ಕೆಲಕಾಲ ಜನರಲ್ಲಿ ಭಯ ಮತ್ತು ಕುತೂಹಲ ಎರಡೂ ಉಂಟಾಗಿತ್ತು.
ಅರಣ್ಯ ಇಲಾಖೆ ಹಾಗೂ ಉರಗ ತಜ್ಞರ ತ್ವರಿತ ಕಾರ್ಯಾಚರಣೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ.