ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಕಂಡು ಬಂದಿರುವ ಭಾರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಭಕ್ತಾದಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಮಾಡಬೇಕೆಂದು ಜೆಡಿಎಸ್ ಪಕ್ಷದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ಸಂಕ್ರಾಂತಿ ಹಬ್ಬ ಮತ್ತು ಅಮಾವಾಸ್ಯೆ ಇರುವುದರಿಂದ ಲಕ್ಷಾಂತರ ಭಕ್ತರು ಶ್ರೀ ಗವಿಮಠ, ಹುಲಿಗೆಮ್ಮ ದೇವಸ್ಥಾನ ಮತ್ತು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಪ್ರಸ್ತುತ ಅಗತ್ಯ ಸಾರಿಗೆ ವ್ಯವಸ್ಥೆ ಕೊರತೆಯಿಂದಾಗಿ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.
ಮಹಿಳೆಯರ, ಮಕ್ಕಳ ಮತ್ತು ಹಿರಿಯ ನಾಗರಿಕರ ಬವಣೆ ಹೇಳತೀರದಾಗಿದೆ. ಆದ್ದರಿಂದ ನಗರಕ್ಕೆ ವಿವಿಧ ಭಾಗಗಳಿಂದ ಹೆಚ್ಚುವರಿ ಬಸ್ ಸೌಲಭ್ಯ ಹಾಗೂ ನಗರ ಮತ್ತು ಹೊರವಲಯಗಳಲ್ಲಿ ಹೆಚ್ಚುವರಿ ನಗರ ಸಾರಿಗೆ ವ್ಯವಸ್ಥೆ, ಸೂಕ್ತ ಸ್ಥಳಗಳಲ್ಲಿ ಬಸ್ ತಂಗುದಾಣ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ಕ್ರಮಗಳು ಹಬ್ಬಗಳು ಮತ್ತು ವಿಶೇಷ ಸಂದರ್ಭದಲ್ಲಿ ಜಾರಿಯಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದು ವಿನಂತಿಸಿದ್ದಾರೆ.
ಪಕ್ಷದ ನಗರ ಘಟಕ ಅಧ್ಯಕ್ಷ ಸೋಮನಗೌಡ ಹೊಗರನಾಳ, ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ, ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ರಮೇಶ ಡಂಬ್ರಳ್ಳಿ, ಕೋಶಾಧ್ಯಕ್ಷ ಮೌನೇಶ್ ಕಿನ್ನಾಳ್, ನಗರ ಘಟಕ ಉಪಾಧ್ಯಕ್ಷ ಗಂಗಾಧರ ವಸ್ತ್ರದ್, ಮಹಿಳಾ ನಗರ ಘಟಕದ ಅಧ್ಯಕ್ಷೆ ನಿರ್ಮಲಾ ಮೇದಾರ, ಉಪಾಧ್ಯಕ್ಷೆ ರತ್ನಮ್ಮ ಹಿರೇಮಠ, ಮುಖಂಡರಾದ ಸಿದ್ದೇಶ ಇಂಗಳದಾಳ, ಬಸವರಾಜ ಎಸ್, ಪ್ರದೀಪ ಧರ್ಮಯಾತ, ಶರಣಮ್ಮ ಸoಗನಾಳ, ವೀಣಾ ಹುಲಗಪ್ಪ, ಭಾಗ್ಯ ಐವಳ್ಳಿ, ಯವರಾಜ ಬೋಚನಹಳ್ಳಿ ಇತರರು ಉಪಸ್ಥಿತರಿದ್ದರು.