ಕೊಪ್ಪಳ: ಮನರೆಗಾ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ (VBGRAMG) ಎಂದು ಬದಲಾಯಿಸಿದ್ದಕ್ಕೆ ಕಾಂಗ್ರೆಸ್ ಪ್ರತಿಭಟನೆ ನಡೆಸುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಹುಬ್ಬಳ್ಳಿ ಶಾಸಕ ಮಹೇಶ್ ತೆಂಗಿನಕಾಯಿ ಹೇಳಿದರು.
ರಾಜ್ಯ ಸರ್ಕಾರಕ್ಕೆ ಈ ಹೆಸರಿನ ಬಗ್ಗೆ ಅಥವಾ ಯೋಜನೆಯ ಅಂಶಗಳ ಬಗ್ಗೆ ಯಾವ ತೊಂದರೆ ಇದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಅವರು ಸೋಮವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ದೇಶ ಒಪ್ಪಿಕೊಂಡಿರುವ ಯೋಜನೆಯ ಒಳ್ಳೆಯ ಅಂಶಗಳನ್ನು ಮರೆಮಾಚಿ ಸುಳ್ಳು ಮಾಹಿತಿಯ ಮೂಲಕ ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
VBGRAMG ಯೋಜನೆಯಿಂದ ಕೆಲಸದ ಹಕ್ಕು ಕಸಿದುಕೊಳ್ಳಲಾಗುವುದಿಲ್ಲ. ಕೆಲಸದ ದಿನಗಳನ್ನು 100ರಿಂದ 125 ದಿನಗಳಿಗೆ ಹೆಚ್ಚಳ ಮಾಡಲಾಗಿದ್ದು, ಇದರಿಂದ ಗ್ರಾಮೀಣ ಜನರ ಆದಾಯ ಭದ್ರತೆ ಹೆಚ್ಚಳವಾಗಿದೆ ಎಂದು ಹೇಳಿದರು.
ಈ ಯೋಜನೆಯನ್ನು ಪ್ರಧಾನಮಂತ್ರಿ ನಿರ್ವಹಿಸಲಿದ್ದಾರೆ ಎಂಬ ಕಾಂಗ್ರೆಸ್ ಆರೋಪ ಸುಳ್ಳು. ಯೋಜನೆಯ ನಿರ್ವಹಣೆ ಗ್ರಾಮ ಪಂಚಾಯಿತಿಗಳಲ್ಲಿಯೇ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು. 2013–14ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಈ ಯೋಜನೆಗೆ 33,000 ಕೋಟಿ ರೂ. ಅನುದಾನ ನೀಡಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2.86 ಲಕ್ಷ ಕೋಟಿ ರೂ. ಅನುದಾನ ನೀಡುತ್ತಿದೆ ಎಂದು ವಿವರಿಸಿದರು.
ಹತ್ತು ವರ್ಷಗಳ ಹಿಂದೆ ಈ ಯೋಜನೆಯಲ್ಲಿ ಶೇ.48 ಮಹಿಳೆಯರು ಭಾಗವಹಿಸುತ್ತಿದ್ದರೆ, ಈಗ ಶೇ.57 ಮಹಿಳೆಯರು ಭಾಗಿಯಾಗುತ್ತಿದ್ದಾರೆ. ಯೋಜನೆಯ ಕಾರ್ಯನಿರ್ವಹಣೆ ಬಗ್ಗೆ ಸುಮಾರು 10 ಲಕ್ಷ ದೂರುಗಳು ಬಂದ ಹಿನ್ನೆಲೆಯಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗಿದೆ. ಹೊಸ ತಿದ್ದುಪಡಿಯಲ್ಲಿ ಬಯೋಮೆಟ್ರಿಕ್ ಹಾಗೂ ಎಐ ತಂತ್ರಜ್ಞಾನ ಬಳಸಲಾಗುತ್ತಿದ್ದು, ಈಗಾಗಲೇ ಲಕ್ಷಾಂತರ ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.
ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರು ಕೂಡ ಶ್ರೀರಾಮರನ್ನು ನೆನೆಯುತ್ತಿದ್ದರು. ಅವರ ಆಶಯದಂತೆ ಈ ಯೋಜನೆಗೆ ರಾಮಜಿ ಎಂಬ ಹೆಸರು ಸೇರಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
ಸಿದ್ದರಾಮಯ್ಯನವರು ಕೇಂದ್ರ ಸರ್ಕಾರ 30 ಯೋಜನೆಗಳ ಹೆಸರು ಬದಲಾಯಿಸಿದೆ ಎಂದು ಆರೋಪಿಸುತ್ತಾರೆ. ಆದರೆ ಕಾಂಗ್ರೆಸ್ 25 ಯೋಜನೆಗಳಿಗೆ ರಾಜೀವ್ ಗಾಂಧಿ, 27 ಯೋಜನೆಗಳಿಗೆ ಇಂದಿರಾ ಗಾಂಧಿ ಹೆಸರು ಇಟ್ಟಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಒಂದೇ ಒಂದು ಯೋಜನೆಯೂ ಇಲ್ಲ ಎಂದು ಹೇಳಿದರು.
ರಾಜೀವ್ ಗಾಂಧಿ ಹೆಸರಿನಲ್ಲಿ 55, ಇಂದಿರಾ ಗಾಂಧಿ ಹೆಸರಿನಲ್ಲಿ 21, ನೆಹರು ಹೆಸರಿನಲ್ಲಿ 22 ಶೈಕ್ಷಣಿಕ ಸಂಸ್ಥೆಗಳಿವೆ. ಕ್ರೀಡೆ ಹಾಗೂ ಟೂರ್ನಮೆಂಟ್‌ಗಳಲ್ಲಿ 23 ರಾಜೀವ್ ಗಾಂಧಿ, 4 ಇಂದಿರಾ ಗಾಂಧಿ ಹಾಗೂ 2 ನೆಹರು ಹೆಸರಿನವುಗಳಿವೆ.
ಅಲ್ಲದೆ 51 ಪ್ರಶಸ್ತಿಗಳು, 31 ಆಚರಣೆಗಳು, 35 ವೈದ್ಯಕೀಯ ಸಂಸ್ಥೆಗಳು, 15 ವಿದ್ಯಾರ್ಥಿವೇತನಗಳು, 15 ರಾಷ್ಟ್ರೀಯ ಉದ್ಯಾನಗಳು ಹಾಗೂ 5 ವಿಮಾನ ನಿಲ್ದಾಣಗಳು ಈ ನಾಯಕರ ಹೆಸರಿನಲ್ಲಿವೆ ಎಂದು ಹೇಳಿದರು.
ರಾಜ್ಯದಲ್ಲಿ ಅಭಿವೃದ್ಧಿ ನಿಂತು ಹೋಗಿದೆ. ಮಹಿಳೆಯರ ಖಾತೆಗೆ ಜಮಾ ಆಗಬೇಕಿದ್ದ 5 ಸಾವಿರ ಕೋಟಿ ರೂ. ಹಣ ಎಲ್ಲಿ ಹೋಗಿದೆ ಎಂಬುದಕ್ಕೆ ಸರ್ಕಾರ ಉತ್ತರಿಸುತ್ತಿಲ್ಲ. ಈ ಸರ್ಕಾರ ಜನರ ಬಗ್ಗೆ ಗಮನ ಹರಿಸುತ್ತಿಲ್ಲ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು, ಮತ್ತೊಬ್ಬರು ಕುರ್ಚಿ ಕಸಿದುಕೊಳ್ಳಲು ನಡೆಸುತ್ತಿರುವ ಗುದ್ದಾಟದಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ನಿಂತಿದೆ ಎಂದು ಆರೋಪಿಸಿದರು.
ಬಳ್ಳಾರಿ ಘಟನೆ, ಗ್ಯಾರಂಟಿ ಹಣ ಕೈ ಸೇರದಿರುವುದು ಸೇರಿದಂತೆ 5–6 ಪ್ರಮುಖ ವಿಷಯಗಳ ಕುರಿತು ಬಿಜೆಪಿ ಶೀಘ್ರದಲ್ಲೇ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಿದೆ. ಹೋರಾಟದ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ ಹಾಗೂ ಡಾ. ಬಸವರಾಜ ಕ್ಯಾವಟರ್ ಉಪಸ್ಥಿತರಿದ್ದರು.