ಕೊಪ್ಪಳ : ಜಿಲ್ಲಾ ಯೋಜನಾ ಸಮಿತಿ ಚುನಾವಣೆ ಗೆಲ್ಲಲ್ಲು ಪಕ್ಷದ ಶಾಸಕರು, ಸಂಸದರು, ಹಾಗೂ ಜಿಲ್ಲಾ ಘಟಕ ಗಂಭೀರವಾಗಿ ಸಮನ್ವಯದಿಂದ ಕಾರ್ಯತಂತ್ರ ರೂಪಿಸಲಿಲ್ಲ ಎಂದು ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಚಂದ್ರಶೇಖರ ನಾಲತ್ವಾಡ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಎಲ್ಲ ಆರಕ್ಕೆ ಆರು ಸ್ಥಾನ ಗೆಲ್ಲುವ ಬಹುಮತ ಕಾಂಗ್ರೆಸ್ ಗೆ ಇದ್ದರೂ ಎರಡು ಸ್ಥಾನಗಳನ್ನು ಮಾತ್ರ ಗೆದ್ದಿದ್ದು ಈ ಚುನಾವಣೆ ಬಗ್ಗೆ ನಮ್ಮ ನಾಯಕರಲ್ಲಿ ಉತ್ಸುಕತೆ ಕಂಡು ಬರಲಿಲ್ಲ.
ನಾವೀಗ ಪಂಚಾಯತ ಚುನಾವಣೆಗಳ ಹೊಸ್ತಿಲಲ್ಲಿ ನಿಂತಿದ್ದೇವೆ. ಇಂತಹ ಸಮಯದಲ್ಲಿ, ಕೈಗೆಟಕಬಹುದಾಗಿದ್ದ ಗೆಲುವು ಬಿಟ್ಟುಕೊಟ್ಟು ಹಾಸ್ಯಾಸ್ಪದರಾಗಿದ್ದೇವೆ. ಬಹುಮತ ಇದ್ದಾಗ್ಯೂ, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲಾಗದ ನಮ್ಮನ್ನು ಮತದಾರರು ಪರಿಹಾಸ್ಯ ಮಾಡುತ್ತಿದ್ದಾರೆ. ಇದರಿಂದಾಗಿ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ನನ್ನಂಥವರು ಮುಜುಗರ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಯೋಜನಾ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಹೊಣೆ ಈವರೆಗೆ ಯಾರೊಬ್ಬರೂ ಹೊತ್ತುಕೊಂಡಿಲ್ಲ. ಅದಕ್ಕೆ ಫಲಿತಾಂಶದ ಪರಾಮರ್ಶೆ ಸಭೆ ನಡೆಯಬೇಕು ಸಭೆಯಲ್ಲಿ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಪ್ರತಿಯೊಬ್ಬರಿಗೆ ನೀಡಬೇಕು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣ ಆದವರ ವಿರುದ್ಧ ಹೈಕಮಾಂಡ್ ಗೆ ವರದಿ ಸಲ್ಲಿಸಿ, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.