ಕೊಪ್ಪಳ : ಜಿಲ್ಲಾ ಯೋಜನಾ ಸಮಿತಿಗೆ ಮಂಗಳವಾರ ( ಜ. 13) ನಡೆದ ಚುನಾವಣೆಯಲ್ಲಿ 6 ಸ್ಥಾನಗಳಲ್ಲಿ ಬಿಜೆಪಿಯ ನಾಲ್ವರು ಗೆದ್ದು ಜಯಭೇರಿ ಬಾರಿಸಿದ್ದು ಕಾಂಗ್ರೆಸ್ ಎರಡು ಸ್ಥಾನ ಪಡೆದು ಹಿನ್ನಡೆ ಅನುಭವಿಸಿದೆ.
ಕೊಪ್ಪಳ ಜಿಲ್ಲೆಯ ಕಾರಟಗಿ ಪುರಸಭೆ ಹಾಗೂ ಕನಕಗಿರಿ, ಕುಕನೂರು, ಭಾಗ್ಯನಗರ ಹಾಗೂ ತಾವರಗೇರಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 96 ಸದಸ್ಯರಿದ್ದಾರೆ. ಇವರಲ್ಲಿ 94 ಮತ ಚಲಾವಣೆಯಾಗಿದ್ದು ಅದರಲ್ಲಿ ಒಂದು ಮತ ತಿರಸ್ಕೃತಗೊಂಡಿದ್ದು 93 ಮತಗಳು ಕ್ರಮಬದ್ದವಾಗಿವೆ.
96 ಸದಸ್ಯರಲ್ಲಿ ಕಾಂಗ್ರೆಸ್ ನ 55 ಹಾಗೂ ಬಿಜೆಪಿಯ 41 ಸದಸ್ಯರಿದ್ದಾರೆ. ಹೆಚ್ಚು ಸದಸ್ಯರು ಇದ್ದರೂ ಕಡಿಮೆ ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಮುಗ್ಗರಿಸಿದೆ. ಕಡಿಮೆ ಸದಸ್ಯರಿದ್ದರೂ ಹೆಚ್ಚು ಸ್ಥಾನ ಬಿಜೆಪಿ ಗೆದ್ದು ಜಯಭೇರಿ ಬಾರಿಸಿದೆ.
ಮುಂಜಾನೆ ಜಿಲ್ಲಾ ಯೋಜನಾ ಸಮಿತಿಯ 6 ಸ್ಥಾನಗಳಿಗೆ ಒಟ್ಟು 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ಪೈಕಿ ಇಬ್ಬರು ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದು 11 ಅಭ್ಯರ್ಥಿಗಳು ಕಣದಲ್ಲಿ ಉಳಿದರು.
ಮಧ್ಯಾಹ್ನ ಚುನಾವಣೆ ನಡೆದು ಬಿಜೆಪಿಯ ಭಾಗ್ಯನಗರ ಪ.ಪಂ.ನ ಪರಶುರಾಮ ನಾಯಕ 46 , ಕುಕನೂರು ಪ.ಪಂ.ನ ಬಾಲರಾಜ್ ಗಾಳಿ 49, ತಾವರಗೇರಾ ಪ.ಪಂ.ನ ಶಿವನಗೌಡ ಪುಂಡಗೌಡರ್ 46, ಕಾರಟಗಿ ಪುರಸಭೆಯ ಸೋಮಶೇಖರಪ್ಪ ಭೇರಿಗಿ 51 ಮತ ಪಡೆದು ವಿಜಯಿಯಾದರು.
ಕಾಂಗ್ರೆಸ್ ನ ಕಾರಟಗಿ ಪುರಸಭೆಯ ಈಶಪ್ಪ ಇಟ್ಟಂಗಿ 46, ಮತ್ತು ಸಿದ್ದೇಶಕುಮಾರ ಕಲ್ಲಬಾಗಿಲಮಠ 54 ಮತ ಪಡೆದು ಗೆಲುವು ಸಾಧಿಸಿದರು.
ಕಾಂಗ್ರೆಸ್ ನ 55 ಮತದಾರರು ಇದ್ರೂ ಗೆದ್ದ ಇಬ್ಬರಲ್ಲಿ ಸಿದ್ದೇಶಕುಮಾರ ಮಾತ್ರ 54 ಮತ ಪಡೆದಿದ್ದು ಇನ್ನೊರ್ವ ಈಶಪ್ಪ 46 ಮತ ಪಡೆದಿದ್ದಾರೆ. ಅಂದ್ರೆ ಕಾಂಗ್ರೆಸ್ ನ ಕೆಲ ಸದಸ್ಯರು ಬಿಜೆಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರಾ ?
ಬಿಜೆಪಿಯ 44 ಸದಸ್ಯರಿದ್ದರೂ ಬಿಜೆಪಿ ಇಬ್ಬರು ಅಭ್ಯರ್ಥಿಗಳು 46, ಉಳಿದಿಬ್ಬರು 49, 51 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.
ಈ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಸಂಜೆ 7 ಗಂಟೆಗೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಡಳಿತ ಭವನ ಹತ್ತಿರ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸೂಗುರು,
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಬಸವರಾಜ ಕ್ಯಾವಟರ್, ಬಿಜೆಪಿ ಮುಖಂಡ ಚಂದ್ರಶೇಖರ್ ಪಾಟೀಲ್ ಹಲಗೇರಿ ಸೇರಿದಂತ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಗಣೇಶ್ ಹೊರತಟ್ನಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸುನೀಲ್ ಹೆಸರೂರು, ರಮೇಶ್ ನಾಡಿಗೇರ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಮರೇಶ್ ಕುಳಗಿ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಹಾಂತೇಶ್ ಮೈನಳ್ಳಿ, ಬಿಜೆಪಿ ಯುವ ಮಖಂಡ ಅಜಯ ಅಗಡಿ, ಕೆ ಮಹೇಶ್ ಸೇರಿದಂತೆ ಮುಖಂಡರು ಕಾರ್ಯಕರ್ತರು ಇದ್ದರು.