ಕೊಪ್ಪಳ : ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಇಂದು 39ನೇ ದಿನಕ್ಕೆ ಕಾಲಿಟ್ಟಿದ್ದು ಈವರೆಗೂ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಧರಣಿ ಸ್ಥಳಕ್ಕೆ ಭೇಟಿ ಕೊಡದೆ ಇರುವುದು ಆಕ್ರೋಶ ಮೂಡಿಸಿದೆ. ಕಾರ್ಖಾನೆ ವಿಷಯದಲ್ಲಿ ಶಾಸಕರ ನಿಲುವು ಕಾರ್ಖಾನೆ ಪರ ಇರಬಹುದಾ ? ಎಂಬ ಚರ್ಚೆ ಜೋರಾಗಿದೆ. ಇದಕ್ಕೆ ಉತ್ತರಿಸಬೇಕಾದ ಶಾಸಕರು ಧರಣಿ ಹತ್ತಿರ ಬಾರದೆ ಇರೋದು ಇನ್ನಷ್ಟು ಚರ್ಚೆಗೆ ಕಾರಣವೂ ಆಗಿದೆ.
ಧರಣಿಯ 38-39 ನೆ ದಿನ ಭಾದಿತ ಗ್ರಾಮಗಳ ವಿದ್ಯಾರ್ಥಿನಿ, ಮಹಿಳೆಯರು ಮತ್ತು ಕೊಪ್ಪಳದ 3 ನೆ ತರಗತಿ ವಿದ್ಯಾರ್ಥಿ ಕೂಡ ಭಾಗವಹಿಸಿ ಮಾತನಾಡಿದ್ದು ವಿಶೇಷ.
ದರಣಿಯ 38 ನೆ ದಿನ ರವಿವಾರ ಆರ್ಯ ವೈಶ್ಯ ಸಮಾಜ ಧರಣಿಯಲ್ಲಿ ಪಾಲ್ಗೊಂಡಿದ್ದರು. ಸಮಾಜದ ಉಪಾಧ್ಯಕ್ಷ ನಾರಾಯಣ ಕುರುಗೋಡ ಮಾತನಾಡಿ, “ನಾವೆಲ್ಲ ವ್ಯಾಪಾರದಲ್ಲಿ ತಲ್ಲೀನರಾದವರು. ಆದರೆ ಕಾರ್ಖಾನೆಗಳ ಮಾಲಿನ್ಯ ನಮಗೆ ತಿಳಿಯದೆ ನಮ್ಮ ಮತ್ತು ಮುಂದಿನ ಪೀಳಿಗೆಯ ಆರೋಗ್ಯ ಹಾಳು ಮಾಡುತ್ತಿದೆ. ದುಡಿದು ಗಳಿಸಿದ ಹಣ ತಿನ್ನಲು ಸಾಧ್ಯವಿಲ್ಲದಿದ್ದರೆ ಅದರ ಪ್ರಯೋಜನವೇನು? ಈ ಹೋರಾಟ ಭವಿಷ್ಯದ ಕಾಳಜಿಗೆ ಹುಟ್ಟಿಕೊಂಡಿದೆ,”
ಕಾರ್ಖಾನೆ ವಿಸ್ತರಣೆ ಮತ್ತು ಹೊಸ ಕಾರ್ಖಾನೆ ತಡೆಯಲು ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದ ಅವರು “ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ಹಂತದ ಯಾವುದೇ ಹೋರಾಟದಲ್ಲಿ ನಾವು ಸಕ್ರಿಯವಾಗಿ ಪಾಲ್ಗೊಳ್ಳುತ್ತೇವೆ,” ಎಂದರು.
ಇದೆ ವೇಳೆ ಧರಣಿ ಸ್ಥಳಕ್ಕೆ ಬಂದ 3 ನೇ ತರಗತಿ ವಿದ್ಯಾರ್ಥಿ ಹರ್ಷರಾಜ್ ಎಂ. ಕಟ್ಟಿಮನಿ - “ಪರಿಸರ ಹಾನಿಯಿಂದ ಜಾನುವಾರುಗಳು ಮತ್ತು ಪಕ್ಷಿಗಳು ಸತ್ತರೆ ಹೇಗೆ ? ಹೊಲದಲ್ಲಿ ಧೂಳು ಬಿದ್ದು ಪಪ್ಪಾಯಿ ಹಾಳಾಗಿದೆ. ಕಾರ್ಖಾನೆ ಬಂದರೆ ಅವರು ಶ್ರೀಮಂತರಾಗುತ್ತಾರೆ, ಆದರೆ ನಾವು ಹೇಗೆ ಬದುಕಬೇಕು?” ಎಂದು ಆಡಿದ ಮಾತು ಎಲ್ಲರ ಮನಕಲಕಿತು.
ಕುಣಿಕೇರಿ ತಾಂಡದ ವಿದ್ಯಾರ್ಥಿನಿ ಅನು ಕೆ.ಜೆ ಮಾತನಾಡಿ,
“ನಮ್ಮ ಊರಲ್ಲಿ ಕ್ಯಾನ್ಸರ್ ಸಾಮಾನ್ಯವಾಗಿದೆ. ಕೆ.ಪಿ.ಆರ್. ಇಂಡಸ್ಟ್ರಿ, ಐ.ಎಲ್.ಸಿ ಮುಂತಾದ ಕಾರ್ಖಾನೆಗಳು ನೀರು-ಗಾಳಿ ಕೆಡಿಸಿವೆ. ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೆ ಸಂದರ್ಭ ಬೆಳಗಟ್ಟಾ ಶ್ರೀಗುರು ಕರಿಬಸವೇಶ್ವರ ಅಜ್ಜಯ್ಯಸ್ವಾಮಿ ಮಠದ ಪೀಠಾಧ್ಯಕ್ಷ ಮಾತೆ ಮಹಾದೇವಮ್ಮ ಧರಣಿಗೆ ಬೆಂಬಲ ಸೂಚಿಸಿದರು.
ಆರ್ಯ ವೈಶ್ಯ ಸಮಾಜದ ಅಧ್ಯಕ್ಷರು ಶ್ರೀನಿವಾಸ ಗುಪ್ತಾ, ಹನುಮೇಶ್ ಇಲ್ಲೂರು, ಮಲ್ಲಿಕಾರ್ಜುನ್ ಜಾನೇಕಲ್, ರಾಘವೇಂದ್ರ ಚಿತ್ರಾಲಿ, ಡಿ. ಗುರುರಾಜ್ (ವಕೀಲ), ಶ್ರೀನಿವಾಸ್ ವೇಮಲಿ, ದೇವೇಂದ್ರಪ್ಪ ಜನಾದ್ರಿ, ರಾಜು ಬೆಲ್ಲಂಕೊಂಡಿ, ಮಕ್ಬೂಲ್ ರಾಯಚೂರು, ಅನಿಲ್ ಗುಡ್ಡದ್, ಕೊಟ್ರೇಶ್ ಬಾದಾಮಿ, ಶಾಂತಯ್ಯ ಅಂಗಡಿ ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು.
----------------
ಧರಣಿ 39 ನೆಯ ಹಾಲವರ್ತಿ ಗ್ರಾಮದ ಭಾದಿತ ಮಹಿಳೆಯರು ಹಾಗೂ ಕರವೇ ಕನ್ನಡ ಸೇನೆ ಸಂಘಟನೆಯವರು ಭಾಗವಹಿಸಿದ್ದರು.
ಬಲ್ದೋಟಾ ಎಂ.ಎಸ್.ಪಿ.ಎಲ್ ನಮ್ಮ ಗ್ರಾಮದ ಪಕ್ಕದಲ್ಲಿದ್ದು, ಶಾಲೆ, ಮನೆಗಳಲ್ಲಿ ಸಾಕಷ್ಟು ಧೂಳು ಬಂದು ಬೀಳುತ್ತದೆ. ಈ ದೂಳಿನಿಂದ ಮನುಷ್ಯರು, ದನ ಕರುಗಳು ರೋಗಪೀಡಿತರಾಗಿ ಸಾಯುತ್ತಿದ್ದೇವೆ. ಕೆರೆಯ ನೀರು ಸಹಿತ ಕುಡಿಯಲು ಆಗುತ್ತಿಲ್ಲ , ನಾವು ಇಲ್ಲಿ ಬದುಕಲಂತೂ ಆಗುತ್ತಿಲ್ಲ. ಇನ್ನು ನಮ್ಮ ಮಕ್ಕಳು ಹೇಗೆ ಬದುಕಬೇಕು? ಅವರ ಭವಿಷ್ಯ ಏನಾಗುತ್ತದೊ ಎಂದು ಹೆದರಿಕೆ ಆಗುತ್ತೆ. ಕಾರ್ಖಾನೆ ತೊಲಗಬೇಕು ಎಂದು ಗ್ರಾಮದ ಶಾರದಮ್ಮ ಹೊಸಮನಿ, ನಿಂಗಮ್ಮ ಮತ್ತು ಯುವಕರು ಧರಣಿಯಲ್ಲಿ ಭಾಗವಹಿಸಿ ನೋವು ಹೇಳಿಕೊಂಡರು.
ಕ.ರ.ವೇ. ಕನ್ನಡ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಉಮೇಶಗೌಡ ಅರಳಹಳ್ಳಿ ಮಾತನಾಡಿ, ತುಂಗಭದ್ರಾ ನದಿ ನೀರು ಹಾಳು ಉಂಟು ಮಾಡಿರುವ ಈ ಕಾರ್ಖಾನೆಗಳನ್ನು ನಾವು ಸಹಿಸಿಕೊಳ್ಳುವುದಿಲ್ಲ. ಗಂಗಾವತಿ, ಸಿಂಧನೂರು, ರಾಯಚೂರು ಮತ್ತು ಬಲಭಾಗದಲ್ಲಿ ವಿಜಯನಗರ, ಬಳ್ಳಾರಿ ಜಿಲ್ಲೆಗಳ ಜನರಿಗೆ ಕಾರ್ಖಾನೆಗಳ ಕಾರಣಕ್ಕೆ ಒಂದು ಬೆಳೆಗೆ ನೀರು ಸಿಗುವಂತೆ ಆಗಿದೆ. ಈ ಕಾರ್ಖಾನೆಗಳನ್ನು ಬಂದ್ ಮಾಡುವವರೆಗೆ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದರು.
ಧರಣಿಯಲ್ಲಿ ಕ.ರ.ವೇ. ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷ ಬಿಟಿ ಮಂಜುನಾಥ, ಅಮರೇಶ್ ಹೇರೂರು, ಹೋರಾಟ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಗೋನಾಳ, ಖಾಜಾಸಾಬ್, ರಫಿ ಕುನ್ನಟಗಿ, ಈರಪ್ಪ ಹೊಸಮನಿ, ಮಂಜಪ್ಪ ನಡಲಮನಿ, ಬಸವರಾಜ ಹಾಲವರ್ತಿ, ಗವಿಸಿದ್ದಪ್ಪ ಹಲಿಗಿ, ಡಿ.ಎಚ್. ಪೂಜಾರ, ಎಲ್ಲಮ್ಮ, ಹುಲಿಗೆಮ್ಮ, ಗುಂಡಮ್ಮ, ಗಾಳಮ್ಮ, ಜಗದೀಶ ಎಸ್ ವಿ ರಾಜೂರ ಚೆಂಬುಲಿಂಗಪ್ಪ ಹಲಗೇರಿ, ಎ.ಎಂ. ಮದರಿ, ಜಂಬಣ್ಣ, ಎಸ್ ಮಹದೇವಪ್ಪ, ಮಹಾದೇವಪ್ಪ ಸೋಂಪುರ, ಗಾಳೆಪ್ಪ ಮುಂಗೋಲಿ, ಬಿ.ಸಿ. ಕರಿಗಾರ್, ಮಹಾಂತೇಶ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಬಸವರಾಜ ಶೀಲವಂತರ ಇದ್ದರು.