ಕೊಪ್ಪಳ: ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ನ. 29ಕ್ಕೆ 30 ದಿನಗಳಾಗುತ್ತವೆ. ಅಂದ್ರೆ ಒಂದು ತಿಂಗಳು.
ಧರಣಿ ಸ್ಥಳಕ್ಕೆ ನೆಪ ಮಾತ್ರಕ್ಕೂ ಈವರೆಗೆ ಶಾಸಕರಾದ ರಾಘವೇಂದ್ರ ಹಿಟ್ನಾಳ ಬಂದಿಲ್ಲ.
ಅನಿರ್ದಿಷ್ಟ ಧರಣಿ ಆರಂಭವಾಗಿರುವುದು ನಗರಸಭೆ ಪಕ್ಕ ನಗರಸಭೆ ಆವರಣದಲ್ಲಿಯೆ. ಧರಣಿ ಸ್ಥಳದಿಂದ ನಗರಸಭೆ 50-100 ಅಡಿಯಲ್ಲಿ ಇದೆ. ಆದರೆ ಈಗಲೂ ನಗರಸಭೆಗೆ ನಾನೆ ಅಧ್ಯಕ್ಷ ಎನ್ನುವ ಅಮ್ಜದ್ ಪಟೇಲ್ ಧರಣಿ ಸ್ಥಳಕ್ಕೆ ಬರಲು 29 ದಿನ ಬೇಕಾಯ್ತು. ಅಂದ್ರೆ ಇವತ್ತು ಅಮ್ಜದ್ ಪಟೇಲ್ ಧರಣಿ ಸ್ಥಳಕ್ಕೆ ಬಂದು ಮಾತನಾಡಿದ್ದು - ಕಾರ್ಖಾನೆ ಒಂದು ವೇಳೆ ವಿಸ್ತರಣೆಯಾದರೆ ಕೊಪ್ಪಳ ಉಳಿಯುವುದಿಲ್ಲ ಎಂದು ಗವಿ ಶ್ರೀಗಳು ಸ್ವತಃ ಬೀದಿಗಿಳಿದು ಭವಿಷ್ಯದ ಅಪಾಯದ ಕುರಿತು ಎಚ್ಚರಿಸಿದ್ದಾರೆ. ಅವರು ಹೋರಾಟದಲ್ಲಿ ಧುಮಿಕಿದ ಮೇಲೆ ಜನರು ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಆದರೆ ಇನ್ನೂ ಹೋರಾಟಕ್ಕೆ ಧುಮುಕಿಲ್ಲ. ಈಗ ನಗರಸಭೆಯ ವ್ಯಾಪ್ತಿ ಕಡಿಮೆ ಮಾಡಿ ಗ್ರಾಮೀಣ ಪ್ರದೇಶಕ್ಕೆ ಭೂಮಿ ಸೇರಿಸಿ ಆಸ್ತಿಗಳ, ನಿವೇಶನಗಳ ಮೌಲ್ಯ ಅಪಮೌಲೀಕರಣ ಮಾಡಲಾಗುತ್ತಿದೆ, ಇದನ್ನು ವಿರೋಧಿಸಿ ಕೋಪದಿಂದ ಕೊಪ್ಪಳವನ್ನೆ ಹಳ್ಳಿ ಎಂದು ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಕೇಳಿದ್ದೇನೆ ಎಂದರು.
ನಮ್ಮ ಮನೆಗೂ ಬಲ್ಡೋಟ ಘಟಕದಿಂದ ಹಾರು ಬೂದಿ, ಕರಿದೂಳು ಬರುವದರಿಂದ ಅದನ್ನೇ ಉಸಿರಾಡಿ ಆರೋಗ್ಯ ಸಮಸ್ಯೆಯಾಗುತ್ತಿದೆ. ಜನ ಅಂತಿಮವಾಗಿ ರೊಚ್ಚಿಗೆದ್ದು ಬೀದಿಗಿಳಿಯಬೇಕು. ಈಗಾಗಲೇ ನಗರಸಭೆಯಲ್ಲಿ ಬಲ್ಡೋಟ ವಿಸ್ತರಣೆ ವಿರೋಧಿಸಿ ಠರಾವು ಮಾಡಿದ್ದೇವೆ. ಅಧಿಕಾರದ ಕೊನೆಯ ದಿನವರೆಗೂ ನನ್ನ ಸೇವೆ ಈ ಕಾರ್ಖಾನೆ ವಿಸ್ತರಣೆ, ಸ್ಥಾಪನೆ ವಿರೋಧಿಸಲು ಚಲಾಯಿಸುತ್ತೇನೆ. ಜನರಿಗೆ ನ್ಯಾಯ ಸಿಗುವವರೆಗೆ ಈ ಚಳವಳಿಯ ಭಾಗವಾಗುತ್ತೇನೆ ಎಂದರು.
ಮಂಜುನಾಥ ಗೊಂಡಬಾಳ ಮಾತನಾಡಿ 31 ಜನ ನಗರಸಭೆ ಸದಸ್ಯರು ಧರಣಿ ಬೆಂಬಲಿಸಿ ಸ್ಪಷ್ಟ ಸಂದೇಶ ಕೊಡಬೇಕು. ನಂತರ ಪ್ರತಿ ದಿನ ಒಬ್ಬ ಸದಸ್ಯರು ತಮ್ಮ ವಾರ್ಡಿನ ನಾಗರಿಕರೊಂದಿಗೆ ಹೋರಾಟದಲ್ಲಿ ಭಾಗವಹಿಸಿಬೇಕು, ಇದು ಜನಪ್ರತಿನಿಧಿಗಳು ತನ್ನ ಮತದಾರರಿಗೆ ಮಾಡುವ ಮೊದಲ ಉಪಕಾರ ಹಾಗೂ ಕರ್ತವ್ಯ ಎಂದರು.
ಇಂದಿನ 29 ನೆ ದಿನದ ಧರಣಿಯಲ್ಲಿ ಸಾಂಸ್ಕೃತಿಕ ಕಲಾ ಬಳಗದವರು ಭಾಗವಹಿಸಿ ಧರಣಿ ಬೆಂಬಲಿಸಿದರು.
ಈ ಸಂದರ್ಭದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ.ಗೋನಾಳ , ವಿನಾಯಕ ಕರಡಿ, ದುರಗಪ್ಪ ಕನಕಮನಿ, ಮಂಜುನಾಥ ಕವಲೂರು, ಕಲಾ ಬಳಗದ ಸಂಜೀವ ಮೂರ್ತಿ ಬೇವಿನಗಿಡ, ಸುಂಕಪ್ಪ ಮೀಸಿ, ಮಹಾದೇವಪ್ಪ ಮಾವಿನಮಡು, ಸುಭಾನ್ ನೀರಲಗಿ, ರವಿ ಕಾಂತನವರ, ಎಸ್. ಬಿ. ರಾಜೂರ, ಎಫ್.ಎಸ್. ಜಾಲಿಹಾಳ, ಮಂಗಳೇಶ ರಾಠೋಡ, ಹನುಮಂತ ಕಟಗಿ, ಗವಿಸಿದ್ದಪ್ಪ ಹಲಿಗಿ, ಮುದಕಪ್ಪ ಹೊಸಮನಿ ಇದ್ದರು.