ಕೊಪ್ಪಳ: “ಮೊದಲ ಬಾರಿಗೆ ಮತಾಧಿಕಾರ ಬಳಕೆ ಮಾಡುತ್ತಿರುವ ಯುವಕರು ಐದು ವರ್ಷಕ್ಕೆ ಒಂದೇ ಬಾರಿ ಮತದಾನ ಮಾಡುವಂತಾಗಬೇಕು. ಪದೇ ಪದೇ ಚುನಾವಣೆ ನಡೆಸುವುದರಿಂದ ದೇಶದ ಸಮಯ, ಸಂಪನ್ಮೂಲ ಹಾಗೂ ಆಡಳಿತ ಯಂತ್ರದ ಶಕ್ತಿಯ ವ್ಯರ್ಥ ವ್ಯಯವಾಗುತ್ತಿದೆ. ಹೀಗಾಗಿ ಒಂದು ರಾಷ್ಟ್ರ ಒಂದು ಚುನಾವಣೆ ಇಂದಿನ ತುರ್ತು ಅವಶ್ಯಕತೆ” ಎಂದು ಒಂದು ರಾಷ್ಟ್ರ ಒಂದು ಚುನಾವಣೆಯ ರಾಜ್ಯ ಸಂಯೋಜಕರಾಗಿರುವ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಅಭಿಪ್ರಾಯಪಟ್ಟರು.
ನಗರದ ಶೋಭಾ ಕನ್ವೆನ್ಷನ್ ಹಾಲಿನಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪದೇ ಪದೇ ಮತದಾನಕ್ಕೆ ಕರೆ ನೀಡುವ ಪ್ರಸ್ತುತ ವ್ಯವಸ್ಥೆಯಲ್ಲಿ ಜನರ ಸಮಯ ವ್ಯರ್ಥವಾಗುವುದು ಮಾತ್ರವಲ್ಲದೇ, ಚುನಾವಣಾ ರಾಜಕೀಯದ ಮೇಲಾಟದಲ್ಲಿ ಜನರ ಏಳಿಗೆ ಕುಂಠಿತಗೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳಿದರು.
ಸಮಾಜ ಸೇವಕರಾದ ಬಸವರಾಜ್ ಕ್ಯಾವಟರ ಮಾತನಾಡಿ, “ದೇಶದ ಆರ್ಥಿಕ ಸಂಪನ್ಮೂಲಗಳನ್ನು ಉಳಿಸಲು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲು ಒಂದು ರಾಷ್ಟ್ರ ಒಂದು ಚುನಾವಣೆಯ ವಿಧೇಯಕ ಜಾರಿಗೆ ಬರಲೇಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನ್ಯಾಷನಲ್ ಪ್ಯಾರಾಮೆಡಿಕಲ್ ಕಾಲೇಜು ಪ್ರಾಚಾರ್ಯ ಗೀತಾ, ಬಳ್ಳಾರಿ ವಿಭಾಗದ ಸಂಯೋಜಕ ಅಭಿಷೇಕ್ ಹಿರೇಮಠ, ಧಾರವಾಡ ವಿಭಾಗದ ಸಂಯೋಜಕ ಕಿರಣಕುಮಾರ ವಿವೇಕವಂಶಿ ಸೇರಿದಂತೆ ಅನೇಕ ಯುವಕರು, ವಿದ್ಯಾರ್ಥಿ ಮಿತ್ರರು ಉಪಸ್ಥಿತರಿದ್ದರು.