ಕೊಪ್ಪಳ : ಜಿಲ್ಲಾ ಕೇಂದ್ರದ ಹತ್ತಿರ ಬಲ್ಡೋಟಾ ಕಾರ್ಖಾನೆ ಸೇರಿದಂತೆ ತಾಲೂಕಿನ ಯಾವುದೆ ಕಾರ್ಖಾನೆ ವಿಸ್ತರಣೆ ಅಗಬಾರದು, ಬಸಾಪುರ ಕೆರೆ ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಮುಕ್ತವಾಗಿಡಬೇಕು ಎಂದು ಆರಂಭವಾಗಿರುವ ಅನಿರ್ದಿಷ್ಟ ಧರಣಿ ಇಂದು 24 ನೆ ದಿನಕ್ಕೆ ಕಾಲಿಟ್ಟಿದೆ.
ಧರಣಿಯಲ್ಲಿ ನಿತ್ಯ ಜಾಗೃತಿ ಭಾಷಣ, ಕಾರ್ಖಾನೆ - ಸರಕಾರ ವಿರುದ್ದ ಘೋಷಣೆಗಳು, ಕ್ರಾಂತಿ ಗೀತೆಗಳು ಕೇಳಿ ಬಂದರೆ ಇವತ್ತು ಧರಣಿ ಸ್ಥಳದಲ್ಲಿ ಸಂಪೂರ್ಣ ಮೌನ.
ಅಂದ್ರೆ ಇಂದು ಉಪವಾಸ ಹಾಗೂ ಮೌನ ಸತ್ಯಾಗ್ರಹ ನಡೆಯಿತು. ಈ ಸತ್ಯಾಗ್ರಹ ನಡೆಸಿದ್ದು ಕೊಪ್ಪಳದ ಗಾಂಧಿ ಬಳಗ. ಪ್ರತಿ ವರ್ಷ ಗಾಂಧಿ ಜಯಂತಿಯಂದು ಗಾಂಧಿ ತತ್ವ ಪಾಲನೆಯ ಗ್ರಾಮಗಳಿಗೆ ಪಾದಯಾತ್ರೆ ಹಮ್ಮಿಕೊಂಡು ಗಮನ ಸೆಳೆದಿರುವ ಗಾಂಧಿ ಬಳಗ ಇಂದು ಸತ್ಯಾಗ್ರಹದಲ್ಲಿ ಪಾಲ್ಗೊಂಡಿತು.
ಬೆಳಗ್ಗೆ ಸಾಲಾರ ಜಂಗ್ ರಸ್ತೆಯಲ್ಲಿ ಇರುವ ಮಹಾತ್ಮಾ ಗಾಂಧಿ ವೃತ್ತದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೌನವಾಗಿ ನಡಿಗೆ ಮೂಲಕ ಧರಣಿ ಸ್ಥಳಕ್ಕೆ ಆಗಮಿಸಿದ ಗಾಂಧಿ ಬಳಗದವರು ಸಂಜೆವರೆಗೆ ಉಪವಾಸ ಮತ್ತು ಮೌನ ಸತ್ಯಾಗ್ರಹ ನಡೆಸಿದರು.
ಇದೆ ಫೆ. 24 ರಂದು ಕಾರ್ಖಾನೆಗಳ ವಿಸ್ತರಣೆ ವಿರುದ್ದ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ಮತ್ತು ಬಂದ್ ನಡೆಯಿತು. ಕಾರ್ಖಾನೆ ವಿಸ್ತರಣೆ ರದ್ದು ಆದೇಶ ತನ್ನಿ ಎಂದು ಶಾಸಕರು ಸಚಿವರು ಸಂಸದರಿಗೆ ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿ ಬಹಿರಂಗ ಪ್ರತಿಭಟನಾ ಸಭೆಯಲ್ಲಿ ಹೇಳಿದರು.
ಆ ಕುರಿತು ಯಾವುದೇ ಕಾರ್ಯ ನಡೆದಿಲ್ಲ. ಸ್ವತಃ ಮುಖ್ಯಮಂತ್ರಿಗಳು ಕೊಪ್ಪಳಕ್ಕೆ ಬಂದಾಗೊಮ್ಮೆ ಕಾರ್ಖಾನೆ ವಿಷಯ ಕೋರ್ಟಲ್ಲಿದೆ, ಕಾರ್ಖಾನೆಗೆ ಕೇಂದ್ರ ಸರ್ಕಾರ ಅನುಮತಿ ಕೊಟ್ಡಿದೆ ಎಂದು ಹೇಳುತ್ತ ಕೊಪ್ಪಳ ಜನರ ಬೇಡಿಕೆಗೆ ರಾಜಕೀಯ ಬಣ್ಣ ಕೊಡಲು ಯತ್ನಿಸುತ್ತಿದ್ದಾರೆ.
ಜಿಲ್ಲೆಯ ಸರ್ವ ಪಕ್ಷ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಮುಖ್ಯಮಂತ್ರಿಗಳು ಕಾರ್ಖಾನೆ ಕೆಲಸ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಹೇಳಿದ್ದಾರೆ. ಆದರೆ ಈಗ ಶಾಶ್ವತವಾಗಿ ರದ್ದು ಆದೇಶ ಹೊರಡಿಸಬೇಕು ಎಂಬುದು ಗಾಂಧಿ ಬಳಗದ ಆಗ್ರಹ.
ಇಂದಿನ ಸತ್ಯಾಗ್ರಹದಲ್ಲಿ ಮಲ್ಲನಗೌಡ, ಆನಂದತೀರ್ಥ ಪ್ಯಾಟಿ, ಬಸವರಾಜ ಸವಡಿ, ಶಿವಪ್ಪ ಹಡಪದ, ಮಹಾಂತೇಶ ಕೊತಬಾಳ, ಮಂಜುನಾಥ ಕವಲೂರು, ಯುವರಾಜ ಬಡಿಗೇರ, ಬಿ ಎ ಆಡೂರು, ಮೌನೇಶ ಹೊಸಕೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಧರಣಿ ಸಂಘಟಕರಾದ ಅಲ್ಲಮಪ್ರಭು ಬೆಟ್ಟದೂರು, ಡಿ.ಹೆಚ್.ಪೂಜಾರ, ಕೆ.ಬಿ. ಗೋನಾಳ ಇತರರು ಇದ್ದರು.