ಕೊಪ್ಪಳ : ಬೆಂಗಳೂರಿಗೆ ಬಿಡದಿ ಹತ್ತಿರ 9 ಸಾವಿರ ಎಕರೆಯ ಐಟಿ ಹಬ್ ತರ್ತೀವಿ ಅಂತಾರೆ ಉಪಮುಖ್ಯಮಂತ್ರಿಗಳು. ಈಗಾಗಲೇ ಅಲ್ಲಿ ಭೂಮಿ ಸಮಸ್ಯೆ ಆಗಿದೆ. ಅದನ್ನು ಬಗೆಹರಿಸೋದು ಬಿಟ್ಟು ಅದಕ್ಕೆ ಇನ್ನಷ್ಟು ತುಪ್ಪ ಸುರಿಯುತ್ತಿದ್ದಾರೆ. ಅದೇ ಐಟಿ - ಎಐ ಹಬ್ ಕೊಪ್ಪಳದಲ್ಲಿ ಮಾಡಬಹುದಲ್ಲ ಇದರಿಂದ ಈ ಭಾಗವೂ ಅಭಿವೃದ್ಧಿ ಆಗಿ ಉದ್ಯೋಗವೂ ಸಿಗುತ್ತೆ ಎಂದು ನಟ, ಸಾಮಾಜಿಕ ಹೋರಾಟಗಾರರ ಚೇತನ್ ಹೇಳಿದರು.
ಅವರು ಮಂಗಳವಾರ ಕೊಪ್ಪಳ ಹತ್ತಿರ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆದಿರುವ ಅನಿರ್ದಿಷ್ಟ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ನಗರೀಕರಣ ಮಾಡುವುದಲ್ಲ. ಅಖಂಡ ಕರ್ನಾಟಕದ ಏಳಿಗೆ ಬಗ್ಗೆ ವಿಚಾರ ಮಾಡಬೇಕು ಹೊರತು ಬ್ಯಾಂಕ್ ಬ್ಯಾಲೆನ್ಸ್ , ಇಂಡಸ್ಟ್ರೀ ಮಾಫಿಯಾ, ವೈಯಕ್ತಿಕ ಬೆಳವಣಿಗೆ ಹೆಚ್ಚು ಮಾಡಿಕೊಳ್ಳುವುದಲ್ಲ.
ಕಾರ್ಖಾನೆಗಳಿಂದ ಈ ಭಾಗದ 28 ಬೃಹತ್ ಕಾರ್ಖಾನೆ ಸೇರಿ ನೂರಾರು ಕಾರ್ಖಾನೆಗಳಿಂದ ಪರಿಸರ ನಾಶ, ಆರೋಗ್ಯಕ್ಕೆ ಹಾನಿ ಆಗ್ತಿದೆ. ಇಲ್ಲಿನ ಉದ್ಯೋಗ ಪರ ರಾಜ್ಯದವರಿಗೆ ಸಿಗ್ತಿದೆ. ಕಾರ್ಖಾನೆಗಳಿಂದ ಲಾಭ ಶೇ. 1 ಇರುವ ಶ್ರೀಮಂತರಿಗೆ ಸಿಗ್ತಿದೆ. ಆದರೆ ಇಲ್ಲಿ ರೈತರ ಭೂಮಿ, ಬೆಳೆ ಹಾಳಾಗಿವೆ. ಕ್ಯಾನ್ಸರ್ ಬರ್ತಿದೆ. ಕಾರ್ಖಾನೆಗಳಿಂದ ಲಾಭ ಪಡೆಯುವ ಮಾಲೀಕ ವರ್ಗಕ್ಕೆ ಹೆಚ್ಚಿನ ತೆರಿಗೆ ಹಾಕಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಸುಧಾರಿಸಬೇಕು.
ಎಲ್ಲ ಹೋರಾಟಗಳಿಂದ ಪರಿಹಾರ ಸಿಗಲ್ಲ. ಶಾಶ್ವತ ಪರಿಹಾರ ಬೇಕು ಅಂದ್ರೆ ಸಮಾನತೆ, ಸಂವಿಧಾನ ಒಪ್ಪುವ ನಾವು ಕಾನೂನು ರೂಪಿಸುವವರು ಆಗಬೇಕು. ಜನಪರವಾದ ಈ ಕೊಪ್ಪಳದ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದರು.