ಕೊಪ್ಪಳ ತಾಲೂಕಿನ ಬಸಾಪುರ ಹತ್ತಿರ ವಿಜಯನಗರ ಎಡದಂಡೆ ಕಾಲುವೆ ದಡದ ಪೊದೆಗಳಲ್ಲಿ ಅಡಗಿದ್ದ ಬೃಹತ್ ಹೆಬ್ಬಾವು, ಜಾಲಿಗಿಡದ ಮೇಲಿದ್ದ ಕೋತಿಯನ್ನು ಏಕಾಏಕಿ ಸುತ್ತಿಕೊಂಡು ಉಸಿರಾಟ ನಿಲ್ಲುವವರೆಗೂ ಬಿಗಿದಿತ್ತು.
ಉಸಿರಾಡಲು ಪರದಾಡುತ್ತಿದ್ದ ಕೋತಿಯ ದೃಶ್ಯ ಸ್ಥಳೀಯ ಜನ ಮೊಬೈಲ್‌ನಲ್ಲಿ ಸೆರೆಹಿಡಿದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೆಬ್ಬಾವು ಮತ್ತು ಕೋತಿ ನೋಡಿದ ಮುದಿಯಪ್ಪ ಮೇಕಾಳಿ ಮತ್ತು ಇತರರು ಕೋತಿ ರಕ್ಷಿಸಲು ಮುಂದಾದರು. ಕೋಲುಗಳನ್ನು ಬಳಸಿ ಹೆಬ್ಬಾವಿನ ಹಿಡಿತ ತಪ್ಪಿಸಲು ಯತ್ನಿಸಿದರೂ, ಅಷ್ಟೊತ್ತಿಗೆ ಕೋತಿ ಪ್ರಾಣ ಕಳೆದುಕೊಂಡಿತ್ತು. ಜನರಿಗೆ ಹೆದರಿದ ಹೆಬ್ಬಾವು ಕಾಲುವೆ ನೀರಿನಲ್ಲಿ ಮಾಯವಾಗಿತ್ತು.
ಇದೇ ಹೆಬ್ಬಾವು ನಿನ್ನೆ ರಾತ್ರಿ ಮತ್ತೆ ಅದೇ ಭಾಗದಲ್ಲಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಉಂಟುಮಾಡಿತು. ತುಂಗಭದ್ರ ಎಡದಂಡೆ ಕಾಲುವೆಯ ಬಳಿ ಅಡಗಿದ್ದ ಹೆಬ್ಬಾವನ್ನು ಜನ ಹಿಡಿದು ಸುರಕ್ಷಿತವಾಗಿ ಅರಣ್ಯ ಭಾಗದಲ್ಲಿ ಬಿಟ್ಟಿದ್ದಾರೆ.