ಕೊಪ್ಪಳ : ನಗರ ಹತ್ತಿರ ಮತ್ತು ತಾಲೂಕಿನ ಯಾವುದೇ ಕಾರ್ಖಾನೆ ವಿಸ್ತರಣೆ ಮಾಡಬಾರದು ಮತ್ತು ಹೊಸ ಕಾರ್ಖಾನೆಗಳಿಗೆ ಅನುಮತಿ ಕೊಡಬಾರದು ಎಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಆರಂಭಿಸಿರುವ ಅನಿರ್ದಿಷ್ಟ ಧರಣಿ ಇಂದು ಎರಡನೆ ದಿನಕ್ಕೆ ಕಾಲಿಟ್ಟಿದೆ.
ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಸೌಜನ್ಯಕ್ಕಾದರೂ ಧರಣಿ ಸ್ಥಳಕ್ಕೆ ಬಾರದೆ ಹೋದರು.
ಧರಣಿ ಸ್ಥಳದಿಂದ ಕೇವಲ 10 ಅಡಿ ದೂರದ ಹೆದ್ದಾರಿಯಲ್ಲಿ ಹೋದ ಈ ಮೂವರು ಧರಣಿ ಸ್ಥಳಕ್ಕೆ ಬಾರದ ಈ ಜನಪ್ರತಿನಿಧಿಗಳ ವಿರುದ್ದ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಅನಿರ್ದಿಷ್ಟ ಧರಣಿ ಆರಂಬಿಸಿರುವ ಬಗ್ಗೆ ನಿನ್ನೆಯೆ ಹೋರಾಟಗಾರರು ಸಚಿವರಿಗೆ ವಿಷಯ ಮುಟ್ಟಿಸಿದ್ದಾರೆ. ಇಂದು ಬೆಳಗ್ಗೆ ರಾಜ್ಯೋತ್ಸವದ ಧ್ವಜಾರೋಹಣಕ್ಕೆ ತೆರಳುವಾಗ ಸಚಿವರು ಧರಣಿ ಸ್ಥಳಕ್ಕೆ ಬರಬಹುದು ಎಂದು ಹೋರಾಟಗಾರರು ಬೆಳಗ್ಗೆ ಎಂಟು ಗಂಟೆಯಿಂದ ಕಾಯ್ದರು. ಬೆಳಗ್ಗೆ ಎಂಟು ನಲವತ್ತರ ಸುಮಾರಿಗೆ ಧರಣಿಯ ಟೆಂಟ್ ಪಕ್ಕದ ಹೆದ್ದಾರಿಯಲ್ಲಿಯೆ ಹೋದ ಸಚಿವರು ಶಾಸಕರು ಸಂಸದರು ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬರಬಹುದು ಎಂದು ಕಾಯ್ದರು. ಆದರೆ ಸಚಿವರು ಬೆಂಗಳೂರಿಗೆ ಹೋಗುವ ನೆಪದಲ್ಲಿ ಹಾಗೆ ಹೋದರು. ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಕೂಡ ಧರಣಿ ಸ್ಥಳಕ್ಕೆ ಬರಲಿಲ್ಲ.
ಎಂಟು ತಿಂಗಳ ಹಿಂದೆ ಫೆ. 24 ರಂದು ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿ ಕಾರ್ಖಾನೆ ವಿಸ್ತರಣೆ ವಿರುದ್ದ ನಡೆಸಿದ ಹೋರಾಟಕ್ಕೆ ಅಪಾರ ಬೆಂಬಲ ವ್ಯಕ್ತವಾಗಿ ಹೋರಾಟ ರಾಜ್ಯದಲ್ಲಿ ಗಮನ ಸೆಳೆದಿತ್ತು. ಆವತ್ತು ಕಾರ್ಖಾನೆ ವಿಸ್ತರಣೆ ರದ್ದು ಆದೇಶ ತನ್ನಿ ಎಂದು ಜನಪ್ರತಿನಿಧಿಗಳಿಗೆ ಹೇಳಿದ್ದ ಶ್ರೀಗಳು ನಂತರ ಈ ಬಗ್ಗೆ ಮೌನವಾಗಿದ್ದಾರೆ. ಎಂಟು ತಿಂಗಳಾದರೂ ಕಾರ್ಖಾನೆ ವಿಸ್ತರಣೆ ವಿಷಯ ಅಯೋಮಯ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಈಡಾಗುತ್ತಿದೆ.
ಆದರೆ ಆಗಾಗ ಹೋರಾಟ, ಮನವಿಗಳ ಮೂಲಕ ಕಾರ್ಖಾನೆ ವಿಸ್ತರಣೆ ವಿರುದ್ದ ಹೋರಾಟ ಜೀವಂತ ಇಟ್ಟಿರುವ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಆರಂಭಿಸಿರುವ ಧರಣಿಗೆ ಬಾರದಿರುವುದು ಜನರ ಬಗ್ಗೆ ಜನಪ್ರತಿನಿಧಿಗಳಿಗೆ ಇರುವ ಅಸಡ್ಡೆ ತೋರಿಸಿದೆ ಎಂದೆ ವಾಖ್ಯಾನಿಸಲಾಗುತ್ತಿದೆ.
---------------
ಕಾರ್ಖಾನೆ ವಿಸ್ತರಣೆ ವಿರೋಧಿ ಹೊರಾಟದ ಎರಡನೆ ದಿನವಾದ ಇಂದು ಧರಣಿಯಲ್ಲಿ ರೈತ ಸಂಘದ ರಾಜ್ಯ ಮುಖಂಡರು, ಕಲ್ಯಾಣ ನಗರ, ಗಾಂಧಿ ನಗರದ ನಿವಾಸಿಗಳು, ಗುತ್ತಿಗೆದಾರರ ಸಂಘದವರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಿದರು.
" ಕ್ಷೇತ್ರದ ಅಭಿವೃದ್ಧಿ ಅಂದರೆ ಅದು ಇಲ್ಲಿರುವ ಜನರ ಆರೋಗ್ಯ ಕೆಡಿಸುವುದಲ್ಲ. ಮೊದಲು ಜೀವ ಮತ್ತು ಆರೋಗ್ಯ ನಂತರ ಉದ್ಯೋಗ, ಬೇಕಾದರೆ ಉದ್ಯೋಗ ಸೃಜನೆಯ ಮಾಲಿನ್ಯಕಾರಕವಲ್ಲದ ಕಾರ್ಖಾನೆಗಳನ್ನು ಸ್ಥಾಪಿಸಲಿ, ಅಲ್ಲದೆ ಈ ಹೋರಾಟ ನಗರದ ಪ್ರತಿಯೊಬ್ಬರ ಮತ್ತು ಬಾಧಿತಗೊಂಡ ಹಳ್ಳಿಗಳ ಜನರದ್ದಾಗಿದೆ. ಇದಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತದೆ "
- ಸುರೇಶ ಭೂಮರಡ್ಡಿ ಜಿಲ್ಲಾಧ್ಯಕ್ಷರು
ಗುತ್ತಿಗೆದಾರರ ಸಂಘ, ಕೊಪ್ಪಳ