ಕೊಪ್ಪಳ : ಇಲ್ಲಿನ ಗವಿಮಠಕ್ಕೆ ಬಹಳ ದೊಡ್ಡ ಶಕ್ತಿ ಇದೆ. ಕಾರ್ಖಾನೆ ವಿಸ್ತರಣೆ ವಿರೋಧಿ ಹೋರಾಟವನ್ನು ಗವಿಮಠದ ಸ್ವಾಮಿಜಿಯವರು ಮುಂದುವರೆಸಿ ಕಾರ್ಖಾನೆ ವಿಸ್ತರಣೆ ನಿಲುಗಡೆ ಆಗೋವರೆಗೂ ಕೊಂಡೊಯ್ಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರು ಚಾಮರಸ ಪಾಟೀಲ್ ವಿನಂತಿ ಮಾಡಿದರು.
ಅವರು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ ಗವಿಮಠಕ್ಕೆ ಬಹು ದೊಡ್ಡ ಭಕ್ತ ಸಮೂಹ ಇದೆ. ರೈತರಿಗಷ್ಟೆ ಅಲ್ಲ. ಜನಸಾಮಾನ್ಯರ ಆರೋಗ್ಯದ ಮೇಲೂ ಕಾರ್ಖಾನೆಯಿಂದ ಕೆಟ್ಟ ಪರಿಣಾಮ ಆಗ್ತದೆ. ಸ್ವಾಮಿಜಿಯವರು ಮೌನ ಅನುಷ್ಠಾನ ಮಾಡುತ್ತಿದ್ದಾರೆ. ಅದರ ಜೊತೆಗೆ ಸರಕಾರಕ್ಕೆ, ಜನಪ್ರತಿನಿಧಿಗಳಿಗೆ ಪತ್ರ ಬರೆದು ಈ ಬಗ್ಗೆ ಒತ್ತಾಯ ಮಾಡಬೇಕು ಎಂದು ವಿನಂತಿಸಿದರು.
ತುಂಗಭದ್ರಾ ಜಲಾಶಯ ಸುತ್ತ ನೂರಾರು ಕಾರ್ಖಾನೆಗಳ ಹೊಗೆ ಧೂಳಿನಿಂದ ನೀರು ಕಲುಷಿತಗೊಂಡಿದೆ. ನಮ್ಮ ಭಾಗದಲ್ಲಿ ಮೊದಲೆಲ್ಲ ಎಡದಂಡೆ ಕಾಲುವೆಯಲ್ಲಿ ತಿಳಿ ನೀರು ಬರುತ್ತಿತ್ತು. ಕುಡಿಯಬಹುದಿತ್ತು. ಆದರೆ ಈಗ ಆ ನೀರು ಸ್ನಾನ ಮಾಡಿದರೆ ತುರಿಕೆ ಬರುತ್ತೆ.
ಕೊಪ್ಪಳ ಹತ್ತಿರವೆ ದೊಡ್ಡ ಫ್ಯಾಕ್ಟರಿ ಬಂದ್ರೆ ಏನು ಗತಿ. ಈಗಾಗಲೇ ಫ್ಯಾಕ್ಟರಿ ಇರುವ ಹಳ್ಳಿ ಜನರ ಆರೋಗ್ಯ ಹಾಳಾಗಿದೆ. ಯಾವುದೇ ಕಾರಣಕ್ಕೂ ಕಾರ್ಖಾನೆ ವಿಸ್ತರಣೆ ಆಗಬಾರದು. ಹಿಂದೆ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಆ ಭಾಗದ ಸ್ವಾಮಿಜಿ ವಿರೋಧಿಸಿದರು. ರೈತ ಸಂಘ ಕೂಡ ಅವರ ಹೋರಾಟಕ್ಕೆ ಬೆಂಬಲ ನೀಡಿತ್ತು ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷರು ಬಡಗಲಪುರ ನಾಗೇಂದ್ರ, ಕಾರ್ಯಾಧ್ಯಕ್ಷರಾದ ಜೆ.ಎಂ. ವೀರಸಂಗಯ್ಯ , ಜಿಲ್ಲಾಧ್ಯಕ್ಷರು ಭೀಮಸೇನ ಕಲಕೇರಿ, ಎನ್.ಡಿ. ವಸಂತಕುಮಾರ ಉಪಸ್ಥಿತರಿದ್ದರು.