ಕೊಪ್ಪಳ : ಹುಲಿಗಿ ಕ್ಷೇತ್ರದ ಬೀದಿ ಬದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆ ತಕ್ಷಣ ನಿಲ್ಲಿಸಿ, ಆ ಪ್ರದೇಶ ಪಾರಂಪರಿಕ ಮಾರುಕಟ್ಟೆ ಎಂದು ಘೋಷಿಸಿ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಬೀದಿ ಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಮಂಜುನಾಥ್ ಕೈದಾಳ್ ಅವರು, ಪ್ರಸಿದ್ಧ ಧಾರ್ಮಿಕ ಸ್ಥಳದಲ್ಲಿ ಹಲವಾರು ವರ್ಷಗಳಿಂದ ಬೀದಿ ಬದಿ ವ್ಯಾಪಾರ
ಮಾಡುತ್ತಿರುವ ಬಡವರು ಇತ್ತೀಚಿನ ತೆರವಿನಿಂದ ಸಂಕಷ್ಟದಲ್ಲಿದ್ದಾರೆ. ಅನೇಕರು ಮೈಕ್ರೋಫೈನಾನ್ಸ್ ಸಾಲದ ಕಂತುಗಳನ್ನು ಕಟ್ಟಲಾಗದೆ ಸಂಕಷ್ಟದಲ್ಲಿದ್ದಾರೆ. ಮಹಿಳೆಯರು, ಬಡ ಕುಟುಂಬಗಳು ಮತ್ತು ದಿನನಿತ್ಯದ ಆದಾಯದ ಮೇಲೆ ಬದುಕುತ್ತಿದ್ದ ವ್ಯಾಪಾರಸ್ಥರು ಈಗ ಆತಂಕದಲ್ಲಿದ್ದಾರೆ.
ಇತ್ತೀಚೆಗೆ ಶೀಗೆ ಹುಣ್ಣಿಮೆಯಂದು ಜನಸಂದಣಿ ತಡೆಯಲು ಏನೂ ಮುಂಜಾಗ್ರತೆ ಮಾಡದೆ ಜೆಸಿಬಿಯಿಂದ ವ್ಯಾಪಾರ ವಸ್ತು ಗುಡಿಸಲುಗಳನ್ನು ತೆರವುಗೊಳಿಸಿದ್ದಾರೆ.
ನವೆಂಬರ್ 5ರೊಳಗೆ ವ್ಯಾಪಾರಕ್ಕೆ ಅನುಮತಿ ನೀಡಬೇಕು ಇಲ್ಲವಾದರೆ ಮುಂದಿನ ಹಂತದ ತೀವ್ರ ಹೋರಾಟ ಮಾಡುವುದಾಗಿ ಹೇಳಿದರು.
ಸಂಘದ ಮುಖಂಡರು ಶರಣು ಗಡ್ಡಿ, ಕೌಶಲ್ಯ ದೊಡ್ಡಗೌಡರ್, ಕೃಷ್ಣಮೂರ್ತಿ (ರಾಜ್ಯ ಉಪಾಧ್ಯಕ್ಷರು), ಅನಿಲ್ (ಎಐಡಿವೈಓ ಮುಖಂಡರು) ಹಾಗೂ ಅಂಬರೀಶ್, ಶಿವಪುತ್ರಪ್ಪ, ಭಾಗ್ಯಮ್ಮ, ಯಮನೂರಪ್ಪ, ಹುಲಿಗೆಮ್ಮ, ರಾಘವೇಂದ್ರ, ನೇತ್ರಾವತಿ, ಪಾರ್ವತಿ ಮುಂತಾದ ವ್ಯಾಪಾರಸ್ಥ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.