ಕೊಪ್ಪಳ : ವಿಶ್ವ ಪ್ರಸಿದ್ದ ಭಾಗ್ಯನಗರ ಕೈ ಮಗ್ಗ ಸೀರೆ ರಫ್ತಿಗೆ ಉತ್ತೇಜನ ಸಿಗಲು ಕ್ರಮ ವಹಿಸುವಂತೆ ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಅವರು, ಗುರುವಾರ ಕೊಪ್ಪಳ ತಾಲೂಕಿನ ಮುನಿರಾಬಾದ ಗ್ರಾಮದ ಬಳಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದರು.
ಭಾಗ್ಯನಗರ ಕೈ ಮಗ್ಗ ಸೀರೆಗೆ ತನ್ನದೇ ಆದ ಇತಿಹಾಸವಿದೆ. ಆದರೆ, ಈಚೆಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಸಿಗದೆ ಇರುವುದರಿಂದ ಇದೇ ವೃತ್ತಿ ಜೀವನ ಸಾಗಿಸುತ್ತಿರುವ ನೇಕಾರ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಕೈ ಮಗ್ಗ ಸೀರೆ ವಿದೇಶಗಳಿಗೆ ರಫ್ತು ಮಾಡಲು ಅವಕಾಶ ಕಲ್ಪಿಸಿದರೆ ಸೂಕ್ತ ಮಾರುಕಟ್ಟೆ ದೊರೆಯಲಿದೆ.
ಜತೆಗೆ ದೇಶಿಯವಾಗಿ ಕೇಂದ್ರ ಸರಕಾರ, ಸಮರ್ಪಕ ಮಾರುಕಟ್ಟೆ ಒದಗಿಸಲು ಆದ್ಯತೆ ನೀಡಬೇಕು ಎಂದು ವೀರೇಶ ಮಹಾಂತಯ್ಯನಮಠ ಅವರು ಕೇಂದ್ರ ಸಚಿವರ ಬಳಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೈಮಗ್ಗದ ಮಾಲೀಕರಾದ ಉಮೇಶ್ ಚಾಮರದ , ಎಸ್.ಅಭಯ್ ಕುಮಾರ್ ಸೇರಿದಂತೆ ಇತರರು ಇದ್ದರು.
ಎಚ್.ಡಿ.ದೇವೆಗೌಡರ ಆರೋಗ್ಯ ವಿಚಾರಣೆ:
ಮಾಜಿ ಪ್ರಧಾನಿ ದೇವೆಗೌಡ್ರರ ಕುಟುಂಬದೊಂದಿಗೆ ವೀರೇಶ ಮಹಾಂತಯ್ಯನಮಠ ಅವರು ಅತ್ಯಾಪ್ತತೆ ಹೊಂದಿರುವುದರಿಂದ ಮನವಿ ಸ್ವೀಕರಿಸಿದ ವೇಳೆ ನಿರ್ಮಲಾ ಸೀತಾರಾಮನ್ ಅವರು, ದೇವೆಗೌಡರ ಅವರ ಆರೋಗ್ಯದ ಬಗ್ಗೆ ಮಹಾಂತಯ್ಯನಮಠ ಅವರ ಬಳಿ ವಿಚಾರಿಸಿದರು. ನನಗೆ ಖುದ್ದಾಗಿ ಭೇಟಿಯಾಗಲು ಸಮಯ ಸಿಕ್ಕಿಲ್ಲ. ಆದರೆ, ದೂರವಾಣಿ ಮೂಲಕ ದೇವೆಗೌಡ್ರು ಅವರೊಂದಿಗೆ ಮಾತನಾಡುವೆ ಎಂದು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇದೇ ವೇಳೆ ತಿಳಿಸಿದರು.
ಬಳಿಕ ವೀರೇಶ ಮಹಾಂತಯ್ಯನಮಠ ಅವರು, ಎಚ್.ಡಿ. ದೇವೆಗೌಡರ ಜೀವನ ಆಧಾರಿತ ನೇಗಿಲು ಗರಿ ಇಂಗ್ಲೀಷ್ ಪ್ರತಿಯ ಪುಸ್ತಕವನ್ನು ಸಚಿವರಿಗೆ ಉಡುಗೊರೆಯಾಗಿ ನೀಡಿದರು.