ಕೊಪ್ಪಳ : ವಂಚನೆ ಪ್ರಕರಣದಲ್ಲಿ ನಗರಸಭೆ ಮಾಜಿ ಸದಸ್ಯೆ ವಿಜಯಾ ಹಿರೇಮಠರನ್ನು ಬೆಂಗಳೂರು ಸಿಸಿಬಿ ಪೊಲೀಸರು ರಾಮದುರ್ಗದಲ್ಲಿ ಅರೆಸ್ಟ್ ಮಾಡಿದ್ದಾರೆ.
ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಿಶೇಷವಾಗಿ ಕಲಬುರ್ಗಿಯ ಹನಮಂತ ಹಾಗೂ ಇತರೆ 12 ಜನರಿಗೆ ಸುಮಾರು 90 ಲಕ್ಷ ರೂ. ಗಳಷ್ಟು ವಂಚಿಸಿದ್ದು ಈ ಬಗ್ಗೆ ಸಿದ್ದಲಿಂಗಯ್ಯ ಹಿರೇಮಠ ( ವಿಜಯಾ ಹಿರೇಮಠ ಪತಿ) , ವಿಜಯಾ ಹಿರೇಮಠ ಹಾಗೂ ಇತರೆ ನಾಲ್ವರ ವಿರುದ್ದ ಕಳೆದ ಜೂನ್ ನಲ್ಲಿ ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸಿದ್ದಲಿಂಗಯ್ಯ ಹಿರೇಮಠ ಹಾಗೂ ವಿಜಯಾ ಹಿರೇಮಠ ದಂಪತಿಗಳು ಹಾಗೂ ಇತರೆ ನಾಲ್ವರು ಸೇರಿ ನ್ಯಾಯಾಂಗ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದೆ. ನಮಗೆ ಬಹಳ ಪರಿಚಯದವರು ಇದ್ದಾರೆ ನಿಮಗೆ ನೌಕರಿ ಕೊಡಿಸುತ್ತೇವೆ ಎಂದು ಕಲಬುರ್ಗಿಯ ಹನಮಂತ ಹಾಗೂ ಇತರೆ 12 ಜನರಿಂದ ಆಗಾಗ ಇಂತಿಷ್ಟು ಎಂಬಂತೆ ಒಟ್ಟು 90 ಲಕ್ಷ ಹಣ ಪಡೆದಿದ್ದಾರೆ.
ಇದರಲ್ಲಿ ವಿಜಯಾ ಹಿರೇಮಠರ ಕೊಪ್ಪಳದ ಬ್ಯಾಂಕ್ ಖಾತೆಗೆ 25 ಲಕ್ಷ , ಹಾಗೂ ಸಿದ್ದಲಿಂಗಯ್ಯ ಹಿರೇಮಠ ಖಾತೆಗೆ 1 ಲಕ್ಷ ರೂ. ಆಕಾಂಕ್ಷಿಗಳು ಜಮಾ ಮಾಡಿದ್ದಾರೆ.
ನಂತರ ದಾಖಲಾತಿ ಪರಿಶೀಲನೆ ಇದೆ ಬನ್ನಿ ಎಂದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಗೆ ಕರೆಸಿದ್ದು ಅಲ್ಲಿ ನಾಲ್ವರು ವಕೀಲರು ಇವರ ದಾಖಲೆ ಪರಿಶೀಲಿಸಿ ನಿಮ್ಮ ಮನೆಗೆ ನೇಮಕಾತಿ ಆದೇಶ ಬರುತ್ತೆ ಅಂತ ಹೇಳಿ ಕಳಿಸಿದ್ದಾರೆ.
ಕೆಲ ತಿಂಗಳು ಗತಿಸಿದರೂ ಆದೇಶ ಬಾರದ ಬಗ್ಗೆ ಕೇಳಿದಾಗ ಚುನಾವಣೆ ಇದೆ ಸ್ವಲ್ಪ ಸಮಯದ ನಂತರ ಬರುತ್ತೆ ಎಂದಿದ್ದಾರೆ. ಆ ನಂತರ ದುಡ್ಡು ಕೊಟ್ಟವರಿಂದ ತಪ್ಪಿಸಿಕೊಂಡು ತಿರುಗುವುದು ಮಾಡಿದ್ದು ನಂತರ ಸಿಕ್ಕಾಗ ಹಣ ವಾಪಸ್ ಕೇಳಿದಾಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದು FIR ಕೂಡ ಆಗಿದೆ.
ರಾಮದುರ್ಗದಲ್ಲಿ ಸಂಬಂಧಿಕರ ಮನೆಯಲ್ಲಿದ್ದ ವಿಜಯಾ ಹಿರೇಮಠರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ವಿಜಯಾ ಹಿರೇಮಠ 2013 - 2018 ವರೆಗೆ ಕೊಪ್ಪಳದ 25 ನೇ ವಾರ್ಡಿನಲ್ಲಿ ಪಕ್ಷೇತರವಾಗಿ ಗೆದ್ದು ಕೌನ್ಸಿಲರ್ ಆಗಿದ್ದರು.