ಕೊಪ್ಪಳ : ರಾಜ್ಯದ ಕಾಂಗ್ರೆಸ್ ಸರಕಾರ ಗ್ಯಾರಂಟಿ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನ ನೇಮಿಸಿ ಅವರಿಗೆ ಭತ್ಯೆ ರೂಪದಲ್ಲಿ ಪ್ರತಿ ತಿಂಗಳು 2 ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತಿದೆ ಇದು ಖಂಡನೀಯ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (KRS) ಜಿಲ್ಲಾಧ್ಯಕ್ಷ ಎ. ಹೆಚ್. ಗೊಡಚಳ್ಳಿ ಹೇಳಿದರು.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜನ ಗ್ಯಾರಂಟಿ ಯೋಜನೆ ನಂಬಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ಹಾಗಾಗಿ ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಉಚಿತವಾಗಿ ಕೆಲಸ ಮಾಡಲಿ. ಸರ್ಕಾರದಿಂದ ಭತ್ಯೆ ಪಡೆಯಬಾರದು.
ಬೇಕಿದ್ದರೆ ನಾವು ನಮ್ಮ ಪಕ್ಷದ ಕಾರ್ಯಕರ್ತರು ಯಾವುದೇ ಭತ್ಯೆ ಗೌರವಧನ ಪಡೆಯದೆ ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿ ಉಚಿತವಾಗಿ ಸ್ವಯಂ ಸೇವಕರಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ. ನಮ್ಮನ್ನು ನೇಮಿಸಿಕೊಂಡು ಸಾರ್ವಜನಿಕರ ಹಣ ಉಳಿಸಲಿ ಎಂದು ಸವಾಲ್ ಹಾಕಿದ ಅವರು ಇಲ್ಲವಾದರೆ ತಕ್ಷಣ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರದ್ದು ಪಡಿಸಲಿ ಎಂದು ಆಗ್ರಹಿಸಿದ್ದರು.
ಗ್ಯಾರಂಟಿ ಯೋಜನಾ ಸಮಿತಿಗಳಿಗೆ ವಾರ್ಷಿಕವಾಗಿ 30 ಕೋಟಿ ಹಣ ಖರ್ಚು ಮಾಡಲಾಗುತ್ತಿದೆ. ಈಗಾಗಲೇ ಸಾರಿಗೆ ಸಂಸ್ಥೆಗಳಿಗೆ 900 ಕೋಟಿಗೂ ಹೆಚ್ಚು ಹಣ ಸರಕಾರ ಕೊಡಬೇಕಿದೆ. ಎರಡೆರಡು ತಿಂಗಳ ಗೃಹಲಕ್ಷ್ಮಿ ಹಣ ಬಂದಿಲ್ಲ. ರಾಜ್ಯದ ಹಲವಾರು ಕೆರೆಗಳ ಅಭಿವೃದ್ಧಿಗೆ ಹಣ ಇಲ್ಲ , ವಿದ್ಯಾರ್ಥಿಗಳಿಗೆ ವೇತನ ನೀಡಿಲ್ಲ ಆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲು ಹಣ ಇದೆ. ಇದು ಸಿದ್ದರಾಮಯ್ಯನವರ ದುರಾಡಳಿತದ ಗ್ಯಾರಂಟಿ.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಹಿಂದಿನ ಸರಕಾರ 40% ಆದ್ರೆ ಇದು 60-70% ಭ್ರಷ್ಟಾಚಾರದ ಸರಕಾರ. ಕಾಳ ಸಂತೆಯಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟವಾಗುತ್ತಿದೆ. ನಮ್ಮ ಪಕ್ಷ ಇಂಥ ಅಕ್ರಮಗಳನ್ನು ಬಯಲಿಗೆಳೆದರೂ ಸರಕಾರ ಮೌನವಾಗಿದೆ. ಇನ್ನು ಸರಕಾರಿ ಅಧಿಕಾರಿಗಳ ಭ್ರಷ್ಟಾಚಾರದ ಪ್ರಕರಣಗಳ ವಿಚಾರಣೆಗೆ ಲೋಕಾಯುಕ್ತ ಪೊಲೀಸರಿಗೆ ಅನುಮತಿ ಕೊಡುತ್ತಿಲ್ಲ ಏಕೆಂದರೆ ಸರಕಾರವೆ ಅಕ್ರಮಗಳಲ್ಲಿ ಈಜಾಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರು ಗಣೇಶ ಅಮೃತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ಕುಮಾರ ಸಾರಂಗಿ, ಜಿಲ್ಲಾ ಕಾರ್ಯದರ್ಶಿ ವೀರೇಶ ಇಂದರಗಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.