ಕೊಪ್ಪಳ : ರಾಜ್ಯ ಕಾಂಗ್ರೆಸ್ ಸರಕಾರ ಬೆಲೆ ಏರಿಕೆ ನಿಯಂತ್ರಿಸುತ್ತಿಲ್ಲ, 18 ಶಾಸಕರ ಅಮಾನತ್ತು, ದಲಿತರ ಹಣ ಗ್ಯಾರಂಟಿಗೆ ಬಳಕೆ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಪರ್ಸೆಂಟ್ ಮೀಸಲು ಖಂಡಿಸಿ ಸೋಮವಾರ ಕೊಪ್ಪಳ ಜಿಲ್ಲಾ ಬಿಜೆಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ರಾಜ್ಯದಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದ ಬಡ ಜನರ ಬದುಕು ದುರ್ಭರ ಆಗುತ್ತಿದೆ. ಇತ್ತೀಚಿಗೆ ವಿಧಾನ ಸೌಧದಲ್ಲಿ ಅಧಿವೇಶನ ಸಂದರ್ಭ ಚರ್ಚೆ ಮಾಡುತ್ತಿದ್ದ 18 ಶಾಸಕರನ್ನು 6 ತಿಂಗಳು ಅಮಾನತು ಮಾಡಿರುವುದು ಖಂಡನೀಯ. ಇದು ಆಯಾ ಕ್ಷೇತ್ರದ ಜನತೆಗೆ ಮಾಡಿರುವ ಅವಮಾನ. ಕೂಡಲೇ 18 ಶಾಸಕರ ಅಮಾನತು ಆದೇಶ ವಾಪಸ್ ಪಡೆಯಬೇಕು.
ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ನೀಡುವುದು ಕಾನೂನುಬಾಹಿರ ಹಾಗೂ ವಿದೇಶದಲ್ಲಿ ಓದುವ ಮುಸ್ಲಿಂ ವಿದ್ಯಾರ್ಥಿಗಳಿಗೆ 20 ಲಕ್ಷ ಇದ್ದ ಸಹಾಯಧನ 30 ಲಕ್ಷಕ್ಕೆ ಹೆಚ್ಚಿಸಿದ್ದು ಖಂಡನೀಯ. ಈ ಯೋಜನೆ ಕೂಡಲೇ ಕೈ ಬಿಡಬೇಕು. ಇಲ್ಲವಾದರೆ ಮತ್ತೆ ಜಿಲ್ಲೆಯಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.
ದಲಿತರಿಗೆ ಮೀಸಲಿಟ್ಟ ಹಣ ಸರಕಾರ ಗ್ಯಾರಂಟಿಗಳಿಗೆ ಬಳಸುತ್ತಿದ್ದು ಈಗಾಗಲೇ 39 ಸಾವಿರ ಕೋಟಿ ಹಣ ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ಕಾಂಗ್ರೆಸ್ ಸರ್ಕಾರ ಈ ಕೆಟ್ಟ ನೀತಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಪ್ರತಿಭಟನಾ ಧರಣಿಯಲ್ಲಿ ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಬಸವರಾಜ ದಡೇಸೂಗುರು ಎಂ ಎಲ್ ಸಿ ಹೇಮಲತಾ ನಾಯಕ, ಡಾ. ಬಸವರಾಜ ಕ್ಯಾವಟರ್, ಅಪ್ಪಣ್ಣ ಪದಕಿ, ತಿಪ್ಪೇರುದ್ರಸ್ವಾಮಿ, ಮಹಾಲಕ್ಷ್ಮಿ ಕಂದಾರಿ, ಶೋಭಾ ನಗರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.