ಕೊಪ್ಪಳ : ಇನ್ನು ಮುಂದೆ ಈ ಗ್ರಾಮದಲ್ಲಿ ಮದ್ಯ ಮಾರುವಂತಿಲ್ಲ ಜೂಜಾಟ ಆಡುವಂತಿಲ್ಲ ಆಡಿಸುವಂತಿಲ್ಲ. ಒಂದು ವೇಳೆ ಈ ನಿರ್ಧಾರ ಮೀರಿದರೆ ಗ್ರಾಮಸ್ಥರೆ ಪೊಲೀಸರಿಗೆ ತಿಳಿಸುತ್ತಾರೆ. ಪೊಲೀಸ್ ಕೇಸ್ ಆದರೆ ಗ್ರಾಮದ ಯಾರೊಬ್ಬರು ಜಮಾನತ್ ಕೊಡುವುದಿಲ್ಲ.
ಹಾಗಂತ ಈ ಗ್ರಾಮಸ್ಥರು ನಿರ್ಧಾರ ಮಾಡಿದ್ದಾರೆ. ಇದು ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದ ನಿರ್ಣಯ.
ಹೌದು ಗೊಂಡಬಾಳ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಜೂಜಾಟ ಹೆಚ್ಚಿದ್ದು ಸಾರ್ವಜನಿಕರಲ್ಲಿ ಕಿರಿಕಿರಿ ಉಂಟು ಮಾಡಿದೆ. ಸಾಮಾಜಿಕವಾಗಿ ಕೆಟ್ಟ ಪರಿಣಾಮ ಬೀರುತ್ತಿದೆ. ಮದ್ಯ ಜೂಜಾಟ ಹದಿಹರೆಯಕ್ಕೆ ಕಾಲಿಡುತ್ತಿರುವ ಯುವಕರ ಮೇಲೂ ಪರಿಣಾಮ ಬೀರುತ್ತಿದೆ ಎಂಬುದನ್ನು ಅರಿತು ಗೊಂಡಬಾಳ ಗ್ರಾಮಸ್ಥರು ಮಾರ್ಚ್ 17 ರಂದು ಈ ನಿರ್ಣಯ ತೆಗೆದುಕೊಂಡಿದ್ದಾರೆ.
ಈ ಹಿಂದೆ ಕೊಪ್ಪಳ ಗ್ರಾಮೀಣ ಸರ್ಕಲ್ ಇನ್ಸಪೆಕ್ಟರ್ ಆಗಿದ್ದ ವಿಶ್ವನಾಥ್ ಹಿರೇಗೌಡರ್ ಸ್ವಯಂ ಪ್ರೇರಿತವಾಗಿ ಅನೇಕ ಗ್ರಾಮಗಳಲ್ಲಿ ಜನರ ಮನವೊಲಿಸಿ, ಮದ್ಯ ಮುಕ್ತ ಗ್ರಾಮಗಳನ್ನಾಗಿ ಮಾಡಿ ಬೋರ್ಡ್ ಸಹಿತ ಹಾಕಿಸಿದ್ದರು. ಅದೂ ಒಂದು ರೀತಿ ಸಣ್ಣ ಕ್ರಾಂತಿ ಎನ್ನಬಹುದು. ಹಿರೇಗೌಡರ್ ಟ್ರಾನ್ಸಫರ್ ನಂತರ ಕೆಲ ಹಳ್ಳಿಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ಆರಂಭವಾಯಿತು.
ಆದರೆ ಈಗ ಅಂಥದ್ದೆ ಕ್ರಾಂತಿ ಗೊಂಡಬಾಳನಲ್ಲಿ ಆಗಿದೆ. ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಕೈಗೊಂಡಿರುವ ನಿರ್ಣಯಗಳು ಸೋಮವಾರದಿಂದಲೆ ಜಾರಿ ಆಗಿವೆ.
ಗೊಂಡಬಾಳನಲ್ಲಿ ಮದ್ಯ ಮಾರುವವರು ಮತ್ತು ಜೂಜಾಟ ಆಡಿಸುವವರು ಬಗ್ಗೆಯೂ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಗ್ರಾಮದ ಯಾವುದೇ ಮನೆ - ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಮಾರಾಟ ಕಂಡು ಬಂದರೆ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡುತ್ತಾರೆ. ಆದಾಗ್ಯೂ ಈ ನಿರ್ಣಯವನ್ನು ಧಿಕ್ಕರಿಸಿ ಮದ್ಯ ಮಾರಾಟ ಮತ್ತು ಜೂಜಾಟ ಆಡಿಸುವುದು ಮಾಡಿದಲ್ಲಿ ಪೊಲೀಸ್ ಕೇಸ್ ಆಗುತ್ತದೆ ನಂತರ ಅವರಿಗೆ ಗ್ರಾಮದ ಯಾರೂ ಜಮಾನತ್ ಕೊಡಲು ಹೋಗಬಾರದು ಅಂತ ನಿರ್ಧಾರವಾಗಿದೆ.