ಕೊಪ್ಪಳ : ಎಸ್‍ಸಿ ವರ್ಗದಲ್ಲಿ ಒಳ ಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಬುಧವಾರ ಅಖಿಲ ಕರ್ನಾಟಕ ಮಾದಿಗ ದಂಡೋರ ಸಂಘಟನೆಯಿಂದ ಕೇಶ ಮುಂಡನ ಮೂಲಕ ಪ್ರತಿಭಟನೆ ನಡೆಯಿತು.
ದಲಿತರ ಮೀಸಲಾತಿಯಲ್ಲಿ ಒಳಮಿಸಲಾತಿ ಜಾರಿ ಮಾಡುವಂತೆ ಕಳೆದ 30 ವರ್ಷದಿಂದ ನಿರಂತರ ಹೋರಾಟ ಮಾಡುತ್ತಾ ಬರಲಾಗಿದೆ. ಎ ಜೆ ಸದಾಶಿವ ಆಯೋಗದ ವರದಿ ಕೂಡ ಒಳಮೀಸಲಾತಿ ಜಾರಿ ಮಾಡಬೇಕೆಂದು ಹೇಳಿದೆ.
ಕೆಲ ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಕೂಡ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರಗಳು ಜಾರಿ ಮಾಡಬಹುದು ಎಂದು ಹೇಳಿದೆ. ಇಷ್ಟಾದರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಕೊಡಲು ಇಲ್ಲ ಸಲ್ಲದ ನೆಪಗಳನ್ನು ಹುಡುಕುತ್ತಾ ಕಾಲ ತಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ರಾಜ್ಯ ಸರಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ದ ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಾದಿಗ ದಂಡೋರ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಹುಸೇನಪ್ಪ ಸ್ವಾಮಿ ಅವರು ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದರು.
ಇದಕ್ಕೂ ಮುಂಚೆ ಬಾಬು ಜಗಜೀವನರಾಮ ಸರ್ಕಲ್ ನಿಂದ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಕೂಡಲೇ ಒಳ ಮೀಸಲಾತಿ ಜಾರಿಯಾಗಬೇಕು ಎ.ಜೆ ಸದಾಶಿವ ಆಯೋಗದ ವರದಿ ಯಥಾವತ್ತಾಗಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಎಸ್. ಮೈಲಾರಪ್ಪ ವಕೀಲರು, ಶಿವಪ್ಪ ಕುರಿ, ಹುಲುಗಪ್ಪ ಬೇವೂರು, ಹಂಪೇಶ ಹರಿಗೋಲು, ಗುಡದಪ್ಪ ತಳಕಲ್ ಹಾಗೂ ವಿವಿಧ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.