ಕೊಪ್ಪಳ : ಜಿಲ್ಲಾ ಕೇಂದ್ರದಲ್ಲಿ ರಸ್ತೆ ಮೇಲೆ ರಸ್ತೆ ಮಾಡುತ್ತಿದ್ದರೆ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಹದಗೆಟ್ಟು ಜನ ಸಂಕಷ್ಟ ಪಡುತ್ತಿದ್ದು ಈಗ ಅದರ ಮುಂದುವರಿಕೆಯಾಗಿ ಬುಧವಾರ ಬಸ್ ಪಲ್ಟಿಯಾಗಿ 45 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಘಟನೆಯು ಅಳವಂಡಿ ಹತ್ತಿರದ ಹಟ್ಟಿ - ಬೆಳಗಟ್ಟಿ ನಡುವೆ ಬೆಳಗ್ಗೆ ಎಂಟೂವರೆ ಸುಮಾರಿಗೆ ನಡೆದಿದೆ. ಬಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದರು.
ಗಾಯಗೊಂಡ 25 ವಿದ್ಯಾರ್ಥಿಗಳಿಗೆ ಮುಂಡರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಓರ್ವ ವಿದ್ಯಾರ್ಥಿನಿ ಕೈ ಮೂಳೆ ಮುರಿತ ಆಗಿದ್ದು ಉಳಿದ ವಿದ್ಯಾರ್ಥಿಗಳು ಗಾಯಾಳು ಆಗಿದ್ದು ಯಾರಿಗೂ ಪ್ರಾಣಾಪಾಯ ಇಲ್ಲ.
ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಇರುವುದರಿಂದ ಬಸ್ ಆಯತಪ್ಪಿ ಪಲ್ಟಿಯಾಗಿದ್ದು ಅಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಹದಗೆಟ್ಟ ರಸ್ತೆಯನ್ನು ಜನರ ಹಿಡಿಶಾಪದ ನಂತರ ರಸ್ತೆ ಕಾಮಗಾರಿ ಆರಂಭಿಸಿದ್ದು ಈವರೆಗೆ ಕಾಮಗಾರಿ ಮುಗಿಯದೆ ಕನಿಷ್ಠ ಸಂಚಾರಕ್ಕೂ ತೊಂದರೆಯಾಗಿದೆ.
---------------
ಘಟನೆಗೆ ಸರಕಾರ ಹೊಣೆ : ಸಿವಿಸಿ
ಬಸ್ ಪಲ್ಟಿ ಮತ್ತು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಬಗ್ಗೆ
ಹೇಳಿಕೆ ನೀಡಿರುವ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ.ವಿ.ಚಂದ್ರಶೇಖರ ಈ ಘಟನೆಗೆ ಕಾಂಗ್ರೆಸ್ ಸರಕಾರ ನೇರ ಹೊಣೆ ಎಂದಿದ್ದಾರೆ.
ಅಳವಂಡಿ ಭಾಗದಲ್ಲಿ ರಸ್ತೆಗಳಿಗೆ ಗುಂಡಿ ಬಿದ್ದು ರಸ್ತೆಗಳೇ ಮಾಯವಾಗಿವೆ. ರಾಜ್ಯದ ಬೇರೆಲ್ಲೂ ಕಂಡು ಬರದಂತಹ ದುಸ್ಥಿತಿಯಲ್ಲಿ ಆ ರಸ್ತೆಗಳದ್ದು ರಸ್ತೆ ರಿಪೇರಿಗಾಗಿ ಪ್ರತಿಭಟನೆ ನಡೆದಿವೆ. ಆದರೂ ಕೊಪ್ಪಳ ಶಾಸಕರು ಕಣ್ಮುಚ್ಚಿ ಕುಳಿತಿದ್ದಾರೆ. ರಸ್ತೆ ರಿಪೇರಿಗಾಗಿ ನೂರಾರು ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ದಾರಿತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ.
ಜೆ ಡಿ (ಎಸ್) ಹಾಗೂ ಬಿಜೆಪಿ ರಸ್ತೆ ಸುಧಾರಣೆಗಾಗಿ ಪ್ರತಿಭಟನೆ ನಡೆಸಿದರೆ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಅನುಸರಿಸಲಾಗಿದೆ. ಉಚಿತ ಬಸ್ ಪ್ರಯಾಣದ ನೀತಿಯಿಂದ ಬಸ್ಸುಗಳು ಕಿಕ್ಕಿರಿದು ತುಂಬಿ ಪ್ರಯಾಣಿಕರ ಗೋಳು ಹೇಳತಿರದಾಗಿದೆ. ಬಸ್ ದರ ಏರಿಸುವಲ್ಲಿ ಧಾವಂತ ತೋರಿಸುವ ಸರಕಾರ ಜನರ ಸುರಕ್ಷಿತ ಪ್ರಯಾಣ ನಿರ್ಲಕ್ಷಿಸಿದೆ. ಇಂಥ ಸರಕಾರ ಮನೆಗೆ ಕಳಿಸುವ ತನಕ ಜೆಡಿಎಸ್ ವಿರಮಿಸುವುದಿಲ್ಲ ಎಂದು ಸಿವಿಸಿ ಪ್ರಕಟಣೆ ನೀಡಿದ್ದಾರೆ.