ಕೊಪ್ಪಳ : ಗುರುವಾರ ಮಾರ್ಚ್ 6 ರ ರಾತ್ರಿ ಗಂಗಾವತಿ ತಾಲೂಕು ಸಾಣಾಪುರ ಹತ್ತಿರ ದೇಶಿ ಮತ್ತು ವಿದೇಶಿ ಪ್ರಜೆಗಳ ಮೇಲೆ ದೈಹಿಕ ಹಲ್ಲೆ ಮತ್ತು ಮಹಿಳೆ ಮೇಲೆ ಲೈಂಗಿಕ ಹಲ್ಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಗಂಗಾವತಿಯಲ್ಲಿ ಇಂದು ಎಸ್ಪಿ ಡಾ. ರಾಮ್ ಅರಸಿದ್ದಿ ಈ ಬಗ್ಗೆ ಮಾಹಿತಿ ನೀಡಿದರು.
ಅರೆಸ್ಟ್ ಆಗಿರುವ ಇಬ್ಬರು ಆರೋಪಿಗಳು ಮಲ್ಲೇಶ ಮತ್ತು ಚೇತನ್ ಸಾಯಿ. ಇವರು ಗಂಗಾವತಿ ನಗರದವರು. ಇನ್ನೊರ್ವ ಆರೋಪಿ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ಚುರುಕುಗೊಳಿಸಿದ್ದಾರೆ.
ಈ ಘಟನೆಯಿಂದ ಹಂಪಿ ಆನೆಗೊಂದಿ ಭಾಗಕ್ಕೆ ಬರುವ ಪ್ರವಾಸಿಗರಲ್ಲಿ ತೀವ್ರ ಭಯ ಹುಟ್ಟಿದೆ. ಪ್ರವಾಸಿಗರಿಗೆ ರಕ್ಷಣೆ ಇಲ್ಲ ಎಂಬ ಭಾವನೆ ಮೂಡಿತ್ತು. ಘಟನೆ ಜರುಗಿದ 48 ಗಂಟೆಗಳಲ್ಲಿ ಮೂವರಲ್ಲಿ ಇಬ್ಬರು ಆರೋಪಿಗಳ ಬಂಧನದಿಂದ ಸಾರ್ವಜನಿಕರು ಕೊಂಚ ಸಮಾಧಾನ ಆಗುವಂತಾಗಿದೆ.
ಮಾರ್ಚ್ 6 ರಾತ್ರಿ ಹೋಂ ಸ್ಟೇ ಮಾಲಿಕಳು ಹಾಗೂ ಇಸ್ರೇಲ್ ನ ಮಹಿಳಾ ಪ್ರಜೆ ಹಾಗೂ ಅಮೇರಿಕದ ಪುರುಷ ಪ್ರಜೆ , ಹಾಗೂ ನಾಸಿಕ್, ಒರಿಸ್ಸಾದ ಪ್ರಜೆ ಒಟ್ಟು ಐವರು ಸಾಣಾಪುರ ಹತ್ತಿರ ಕಾಲುವೆ ಪಕ್ಕ ಕುಳಿತು ಗಿಟಾರ್ ನುಡಿಸುತ್ತಿದ್ದರು.
ಆಲ್ಲಿಗೆ ಬೈಕ್ ನಲ್ಲಿ ಬಂದ ಮೂವರು ದುಷ್ಟರು ಪೆಟ್ರೋಲ್ ಗೆ ಹಣ ಕೇಳಿದ ವಿಷಯದಲ್ಲಿ ಜಗಳ ಆರಂಭವಾಗಿ ಮೂವರು ಪುರುಷ ಪ್ರವಾಸಿಗರನ್ನು ಕಾಲುವೆಗೆ ನೂಕಿದ್ದಾರೆ. ಅವರಲ್ಲಿ ಇಬ್ಬರು ಈಜಿಕೊಂಡು ಮೇಲೆ ಬಂದಿದ್ದರೆ ಒರಿಸ್ಸಾ ಮೂಲದ ಬಿಬಾಸ್ ಕಾಣೆಯಾಗಿದ್ದ. ಆತನ ಶವ ಇಂದು ಬೆಳಗ್ಗೆ ಮಲ್ಲಾಪುರ ಹತ್ತಿರ ಪತ್ತೆಯಾಗಿದೆ.
ಇದೇ ಸಂದರ್ಭದಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆಸಿದರು ಎಂಬ ದೂರಿನಂತೆ FIR ಕೂಡ ದಾಖಲಾಗಿದೆ. ಈ ಬಗ್ಗೆ ಮೆಡಿಕಲ್ ವರದಿ ಬರಬೇಕು ಎಂದು ಎಸ್ಪಿ ಡಾ. ರಾಮ್ ಅರಸಿದ್ದಿ ಹೇಳಿದರು.
ಅಂದು ರಾತ್ರಿ ಬೈಕ್ ನಲ್ಲಿ ಸುತ್ತಾಡಲು ಹೋಗಿದ್ದೇವು. ಅವರು ಕುಳಿತಿದ್ದು ನೋಡಿ ಹಣ ಕಸಿಯಲು ನೋಡಿದೇವು ಆಗ ಅವರು ಪ್ರತಿರೋಧ ತೋರಿದ್ದಾರೆ. ಸಿಟ್ಟಿನಲ್ಲಿ ನಮ್ಮಿಂದ ಈ ಘಟನೆ ಜರುಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಹೇಳಿದರು.
ಘಟನೆ ನಂತರ ಆರೋಪಿಗಳ ಪತ್ತೆಗಾಗಿ ಪೊಲೀಸರ ಆರು ತಂಡಗಳು ರಚನೆಯಾಗಿದ್ದವು. ಇಬ್ಬರ ಬಂಧನ ಆಗಿದ್ದು ಇನ್ನೊಬ್ಬನ ಬಂಧನಕ್ಕಾಗಿ ಹುಡುಕಾಟ ನಡೆದಿದೆ.